ಕಾಸರಗೋಡು : ಕರ್ನಾಟಕ ರಸ್ತೆ ಸಾರಿಗೆ ಬಸ್ಸಿನಲ್ಲಿ ನಿರ್ವಾಹಕ ಕಾಲೇಜು ವಿದ್ಯಾರ್ಥಿನಿಯೋರ್ವೆಗೆ ದೈಹಿಕ ಕಿರುಕುಳ ನೀಡಲೆತ್ನಿಸಿದ್ದು ಇದನ್ನು ಪ್ರಶ್ನಿಸಿ ತಗಾದೆ ಎಬ್ಬಿಸಿದ ವಿದ್ಯಾರ್ಥಿನಿಯನ್ನು ಅರ್ಧ ದಾರಿಯಲ್ಲೇ ಇಳಿಸಿ ಹೋದ ಪ್ರಕರಣ ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ 8.45 ರ ಸುಮಾರಿಗೆ ಈ ಘಟನೆ ನಡೆದಿದೆ. ಬಂದ್ಯೋಡುವಿನಿಂದ ಮಂಗಳೂರಿನ ಕಾಲೇಜಿನ ಪರೀಕ್ಷೆಗೆಂದು ವಿದ್ಯಾರ್ಥಿನಿ ತೆರಳುತ್ತಿದ್ದಳು. ಟಿಕೆಟ್ ಪಡೆಯಲು ಬಂದ ಕಂಡಕ್ಟರ್ ವಿದ್ಯಾರ್ಥಿನಿಯೊಡನೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಗದರಿಸಿದಳು. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ಕಂಡಕ್ಟರ್ "ನೀನು ಏನು ಬೇಕಾದರೂ ಮಾಡು, ನನಗೆ ಯಾವುದೇ ತೊಂದರೆ ಇಲ್ಲ" ಎಂದು ಸವಾಲು ಹಾಕಿದ್ದಾಗಿ ವಿದ್ಯಾರ್ಥಿನಿ ಹೇಳುತ್ತಾಳೆ. ಜಗಳ ತಾರಕಕ್ಕೇರುತ್ತಿದ್ದಂತೆ, ಬಸ್ ಚಾಲಕ ಕೂಡ ಘಟನೆಯಲ್ಲಿ ಮಧ್ಯಪ್ರವೇಶಿಸಿದ. ನಂತರ, ಬಸ್ ಮಂಜೇಶ್ವರ ತಲುಪಿದಾಗ, ವಿದ್ಯಾರ್ಥಿನಿಯನ್ನು ಅರ್ಧ ದಾರಿಯಲ್ಲಿ ಇಳಿಸಿ ಬಸ್ ತೆರಳಿರುವುದಾಗಿ ತಿಳಿಸಿದ್ದಾಳೆ. ಏತನ್ಮಧ್ಯೆ, ಬಸ್ಸಿನಲ್ಲಿ ಇಷ್ಟೆಲ್ಲಾ ತೊಂದರೆ ಸಂಭವಿಸಿದರೂ, ಯಾವುದೇ ಪ್ರಯಾಣಿಕರು ಮಧ್ಯಪ್ರವೇಶಿಸಲಿಲ್ಲ ಎಂದು ದೂರುದಾರೆಯಾದ 19 ವರ್ಷದ ಯುವತಿ ಹೇಳುತ್ತಾಳೆ. ಈ ಬಗ್ಗೆ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.

0 Comments