ಮಂಗಳೂರು: ಹಲವಾರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಲೆಯಾಳಿಯೋರ್ವ ಕದ್ದ ಬೈಕ್‌ನೊಂದಿಗೆ ಸಿಕ್ಕಿಬಿದ್ದಿದ್ದಾನೆ. ತಿರುವನಂತಪುರ ಮೂಲದ ಆದಿತ್ ಗೋಪನ್ ಅಲಿಯಾಸ್ ಮುತ್ತು ಕೃಷ್ಣ (32) ಬಂಧಿತ ಆರೋಪಿ. ಗುರುವಾರ ಸಂಜೆ ಕದ್ರಿ ಜೋಗಿ ಮಠದ ಬಳಿ ವಾಹನ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕದ್ದ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದಾಗ ಪೊಲೀಸರು ಅನುಮಾನಾಸ್ಪದ ಯುವಕನನ್ನು ವಿಚಾರಿಸಿದಾಗ ಕಳ್ಳತನದ ಮಾಹಿತಿ ಬೆಳಕಿಗೆ ಬಂದಿದೆ. ನವೆಂಬರ್ 21 ರಂದು ಮಹಿಳೆಯೋರ್ವರ 1.5 ಪವನ್ ತೂಕದ ಚಿನ್ನದ ಚೈನನ್ನು ಮತ್ತು ಸೆಪ್ಟೆಂಬರ್ 27 ರಂದು ಮೂಲ್ಕಿಯ ಕೋಟೆಕೇರಿಯಲ್ಲಿ ಒಂಟಿಯಾಗಿದ್ದ ಮಹಿಳೆಯ ಚಿನ್ನವನ್ನು ದೋಚಲಾಗಿತ್ತು. ಬೈಂದೂರು, ಕುಂದಾಪುರ, ಸುರತ್ಕಲ್‌ನ ಚೊಕ್ಕಬೆಟ್ಟು ಮತ್ತು ಸುರತ್ಕಲ್‌ನಲ್ಲಿ ಹಲವಾರು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನಲ್ಲಿಯೂ ಈತನ ವಿರುದ್ಧ ಹಲವಾರು ಪ್ರಕರಣಗಳಿವೆ. ನಾಗರಕೋಯಿಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾನೆ. ದೇಶಾದ್ಯಂತ ರೈಲಿನಲ್ಲಿ ಪ್ರಯಾಣಿಸಿ ಈತ ಕಳ್ಳತನ ಮಾಡುತ್ತಾನೆ. ಕಳವುಗೈದ ನಾಲ್ಕು ದ್ವಿಚಕ್ರ ವಾಹನಗಳು ಮತ್ತು ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

0 Comments