ಕುಂಬಳೆ : ಗಡಿ ಪ್ರದೇಶವಾದ ಕಾಸರಗೋಡಿನ ಕನ್ನಡದ ನಿರಂತರ ಅವಗಣನೆ ಹಾಗೂ ಭ್ರಷ್ಟಾಚಾರ, ಪರಿಸರ ನಾಶದ ಗಣಿಗಾರಿಕೆ ಖಂಡಿಸಿ ಪರಿಸರ ಪ್ರೇಮಿ, ಸಾಮಾಜಿಕ ಹೋರಾಟಗಾರ ಈ ಬಾರಿ ತ್ರಿಸ್ಥರ ಹಂತದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕುಂಬಳೆ ನಾಯ್ಕಾಪು ನಿವಾಸಿ ಕೇಶವ ನಾಯಕ್ ಈ ರೀತಿಯ ಸ್ಪರ್ಧಾರ್ಥಿಯಾಗಿದ್ದಾರೆ.
ತಾನು ನಾಮಪತ್ರ ಸಲ್ಲಿಸುವಾಗ ಕನ್ನಡದಲ್ಲಿ ಯಾವುದೇ ನಮೂನೆಗಳಿಲ್ಲದೆ ಭರ್ತಿಗೊಳಿಸಲು ಸಂಕಷ್ಟಕ್ಕೊಳಗಾಗಬೇಕಾಯಿತು. ಬಳಿಕ, ನಾಮಪತ್ರಿಕೆಗಳನ್ನು ಮಲಯಾಳಂ ಸ್ನೇಹಿತರು ಮತ್ತು ಅಧಿಕಾರಿಗಳ ಸಹಾಯದಿಂದ ಅನುವಾದಿಸಲಾಯಿತು. ಇದಲ್ಲದೆ, ಎಸ್.ಐ.ಆರ್. ಫಾರ್ಮ್ ಗಳನ್ನು ಸಂಪೂರ್ಣ ಮಲೆಯಾಳಂನಲ್ಲಿ ಮಾತ್ರ ನೀಡಲಾಗಿದೆ. ಕನ್ನಡವನ್ನು ಮಾತ್ರ ತಿಳಿದಿರುವ ಗಡಿ ಪ್ರದೇಶದ ಜನರು ಫಾರ್ಮ್ ಗಳನ್ನು ಹೇಗೆ ಭರ್ತಿ ಮಾಡಬೇಕು? ಕನ್ನಡ ಭಾಷೆಗಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಜನರಿಗೆ ಕನ್ನಡದಲ್ಲಿ ಎಸ್.ಐ.ಆರ್. ಫಾರ್ಮ್ ಗಳನ್ನು ಪಡೆಯಲು ಅಥವಾ ಅವುಗಳನ್ನು ಭರ್ತಿ ಮಾಡಲು ತಿಳಿದಿಲ್ಲ. ವಿವಿಧ ಭಾಷೆಗಳನ್ನು ಮಾತನಾಡುವ ಮಂಜೇಶ್ವರದ ಜನರು ಅನಾಥರಂತೆ ವಾಸಿಸುತ್ತಿರುವಾಗ ಕನ್ನಡ ಭಾಷಾ ಕಾರ್ಯಕರ್ತರು ಭಾಷೆಯ ಹೆಸರಿನಲ್ಲಿ ದ್ವೇಷವನ್ನು ಮಾತ್ರ ಹರಡುತ್ತಿದ್ದಾರೆ ಎಂದು ಆರೋಪಿಸಿ ಚುನಾವಣ ಕಣಕ್ಕೆ ಇಳಿದಿರುವ ಅವರು ಏಕ ಬಾರಿಗೆ ಮೂರು ಕಡೆ ಸ್ಪರ್ಧಿಸಲು ನಾಮ ಪತ್ರ ಸಲ್ಲಿಸಿದ್ದಾರೆ.
ಕುಂಬಳೆ ಗ್ರಾ.ಪಂ.ನ 24ನೇ ವಾರ್ಡಿನಿಂದ, ಕಾಸರಗೋಡು ಬ್ಲೋಕ್ ಪಂ.ಮೊಗ್ರಾಲ್ ಡಿವಿಶನ್ ನಿಂದ ಹಾಗೂ ಜಿಲ್ಲಾ ಪಂಚಾಯತಿಗೆ ಕುಂಬಳೆ ಡಿವಿಶನ್ ನಿಂದ ಸ್ಪರ್ಧಿಸುತ್ತಿದ್ದಾರೆ. ಕನ್ನಡ ಮಾಧ್ಯಮ, ಸಂಘಟನೆ ಹೆಸರಲ್ಲಿ ಹಲವರು ಮಾಧ್ಯಮ ಸಂಪರ್ಕವಿಲ್ಲದವರು ಅಥವಾ ಯಾವುದೋ ಕಾಲದಲ್ಲಿ ಪತ್ರಿಕೆಯಲ್ಲಿ ಯಾವುದೋ ವಿಭಾಗದಲ್ಲಿ ಕೆಲವು ಕಾಲ ದುಡಿದವರು ಈಗಲೂ ಪತ್ರಕರ್ತರ ಸೋಗಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಇಲ್ಲಿ ನೈಜ ಪತ್ರಕರ್ತರಿಗೆ ಯಾವುದೇ ಮೌಲ್ಯ ಲಭಿಸುತ್ತಿಲ್ಲ. ಉತ್ಸವಗಳ ಹೆಸರಲ್ಲಿ ಕರ್ನಾಟಕದಿಂದ ಹಣ ಜೇಬಿಗಿಳಿಸುವ ಹಲವರು ಇಲ್ಲಿಯ ಕನ್ನಡಿಗರ ನೈಜ ಸಮಸ್ಯೆಗಳತ್ತ ಗಮನ ನೀಡುತ್ತಿಲ್ಲ ಎಂದವರು ಆರೋಪಿಸಿದರು. ಈ ಎಲ್ಲಾ ವಂಚನೆಗಳಿಗೆ ಕೊನೆ ಹಾಡಲು ತಾನು ಚುನಾವಣಾ ಕಣಕ್ಕಿಳಿದಿರುವುದಾಗಿ ಕೇಶವ ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

0 Comments