ಸಾಂದರ್ಭಿಕ ಚಿತ್ರ
ಬೆಳಗ್ಗಿನ ಜಾವ ನಿಯಂತ್ರಣ ತಪ್ಪಿದ ಕಾರೊಂದು ಕೊಳಕ್ಕೆ ಬಿದ್ದಿದ್ದು ಅಪಘಾತವನ್ನರಿತ ಮಸೀದಿಯ ಇಮಾಮ್ ಧ್ವನಿವರ್ಧಕದ ಮೂಲಕ ಸಹಾಯಕ್ಕಾಗಿ ಕರೆ ಮಾಡುವ ಮೂಲಕ ಏಳು ಜೀವಗಳನ್ನು ಉಳಿಸಿದರು. ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೌಲಾನಾ ಅಬ್ದುಲ್ ಬಾಸಿತ್ ಎಂಬ ಇಮಾಮ್ ಬೆಳಿಗ್ಗೆ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ಗ್ರಾಮಸ್ಥರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಇದರಿಂದ, ಮುಳುಗುತ್ತಿದ್ದ ವಾಹನದಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಲು ಸ್ಥಳೀಯರು ಧಾವಿಸಿದರು. ನಿಯಂತ್ರಣ ತಪ್ಪಿದ ವಾಹನವು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಿಂದ ಹೊರಬಂದು ಕೊಳಕ್ಕೆ ಬಿದ್ದಿತು. ಬೆಳಗಿನ ಜಾವವಾಗಿದ್ದರಿಂದ, ಹೆಚ್ಚಿನವರು ನಿದ್ರಿಸುತ್ತಿದ್ದರು. ಕಾರಿನೊಳಗಿದ್ದವರಿಗೂ ಏನಾಯಿತು ಎಂದು ಅರ್ಥವಾಗಲಿಲ್ಲ. ಹೊರಗೆ ದೊಡ್ಡ ಶಬ್ದ ಕೇಳಿ, ಮಸೀದಿಯ ಇಮಾಮ್ ಮತ್ತು ಮಿರಾಬಾರಿ ಮದರಸಾದ ಶಿಕ್ಷಕ ಮೌಲಾನಾ ಅಬ್ದುಲ್ ಬಾಸಿತ್ ತಕ್ಷಣ ಹೊರಗೆ ಬಂದು ನೋಡಿದಾಗ ನೀರಿನಲ್ಲಿ ಮುಳುಗುತ್ರಿದ್ದ ವಾಹನವನ್ನು ಕಂಡು ತಕ್ಷಣ ಅಪಘಾತ ಸಂಭವಿಸಿದೆ ಎಂದು ಮನಗಂಡು ರಕ್ಷಣೆಗೆ ಧಾವಿಸುವಂತೆ ಅವರು ಮಸೀದಿಯ ಧ್ವನಿವರ್ಧಕದ ಮೂಲಕ ಸ್ಥಳೀಯ ನಿವಾಸಿಗಳಿಗೆ ಕರೆ ನೀಡಿದರು. ಕೆಲವೇ ನಿಮಿಷಗಳಲ್ಲಿ, ಪ್ರದೇಶದ ನಿವಾಸಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ವಾಹನದಲ್ಲಿ ಸಿಲುಕಿದ್ದ ಎಲ್ಲಾ ಏಳು ಪ್ರಯಾಣಿಕರನ್ನು ರಕ್ಷಿಸಲಾಯಿತು.

0 Comments