ಕಾಸರಗೋಡು: ಜಿಲ್ಲೆಯ ಹೊಸದುರ್ಗ ನ್ಯಾಯಾಲಯದಲ್ಲಿ ರಾಹುಲ್ ಮಾಮ್‌ಕೂಟತಿಲ್ ಶಾಸಕ ಶರಣಾಗಬಹುದು ಎಂಬ ವದಂತಿಗಳು ಕೇಳಿ ಬಂದ ಹಿನ್ನಲೆಯಲ್ಲಿ ಗುರುವಾರ ಸಂಜೆಯಿಂದ ರಾತ್ರಿಯ ತನಕ ನಾಟಕೀಯ ರಂಗಕ್ಕೆ ಹಲವು ಜನ ಸಾಕ್ಷಿಯಾದರು. ಆದರೆ ಮ್ಯಾಜಿಸ್ಟ್ರೇಟ್ ಸಂಜೆ 7:30 ಕ್ಕೆ ಮರಳಿದರು. ನ್ಯಾಯಾಲಯದ ಆವರಣದಲ್ಲಿದ್ದ ಪೊಲೀಸ್ ಪಹರೆ ಸಡಿಲಗೊಳಿಸುವುದರ ಜತೆಗೆ ರಾಹುಲ್ ಶರಣಾಗುತ್ತಾರೆ ಎಂಬ ವದಂತಿ ಸಮಾಪ್ತಿಗೊಂಡಿತ್ತು. ವಿಶೇಷ ತನಿಖಾ ತಂಡದ ವಶದಲ್ಲಿ ರಾಹುಲ್ ಇದ್ದಾರೆ ಎಂಬ ಮಾಹಿತಿಯೂ ಇತ್ತು. ರಾಹುಲ್ ಆಗಮಿಸಬಹುದು ಎಂಬ ಮಾಹಿತಿಯ ನಂತರ, ಹೊಸದುರ್ಗ ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಪಹರೆ ಬಿಗಿಗೊಳಿಸಲಾಗಿತ್ತು. ನ್ಯಾಯಾಲಯದ ಸಮಯ ಮುಗಿದ ನಂತರವೂ ನ್ಯಾಯಾಧೀಶರು ಸೇರಿದಂತೆ ಉನ್ನತ ಅಧಿಕಾರಿಗಳು ನ್ಯಾಯಾಲಯದಲ್ಲಿಯೇ ಇದ್ದರು. ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ ಅವರು ಶರಣಾಗಬಹುದು ಎಂಬ ವದಂತಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಕಾಸರಗೋಡು ನ್ಯಾಯಾಲಯಗಳಲ್ಲಿ ಈಗಾಗಲೇ ವ್ಯವಸ್ಥೆಗಳನ್ನು ಮಾಡಿದ್ದರು. ಮಧ್ಯಾಹ್ನದ ವೇಳೆಗೆ ಪತ್ರಕರ್ತರು ನ್ಯಾಯಾಲಯದ ಆವರಣ ತಲುಪಿದರು. ಈ ಸಂದರ್ಭ ಪೊಲೀಸರು ಅಥವಾ ಇತರ ಅಧಿಕಾರಿಗಳಿಂದ ಯಾವುದೇ ಮಾಹಿತಿ ಲಭಿಸಲಿಲ್ಲ. ಕರ್ನಾಟಕದ ಸುಳ್ಯದಲ್ಲಿ ರಾಹುಲ್ ಅಡಗಿಕೊಂಡಿದ್ದಾರೆ ಎಂಬ ವದಂತಿಯಂತೆ ಕಾಸರಗೋಡು ಇದಕ್ಕೆ ಹತ್ತಿರದ ಜಿಲ್ಲೆಯಾಗಿರುವುದರಿಂದ ಹೊಸದುರ್ಗ ನ್ಯಾಯಾಲಯದಲ್ಲಿ ಶರಣಾಗುತ್ತರೆಂದು ಮಾಹಿತಿ ಇತ್ತು. ನ್ಯಾಯಾಲಯದ ಆವರಣದಲ್ಲಿ ಭಾರೀ ಪ್ರಮಾಣದಲ್ಲಿ ಸಾರ್ವಜನಿಕರು ಹಾಗೂ ಯುವ ಮೋರ್ಚಾ ಮತ್ತು ಡಿವೈಎಫ್‌ಐ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.

0 Comments