ನವದೆಹಲಿ: ಭಾರತವು ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ. ಶಾಂತಿಯಲ್ಲಿ ಭಾರತ ನಂಬಿಕೆಯಿಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಹೈದರಾಬಾದ್ ಹೌಸ್‌ನಲ್ಲಿ ನಡೆದ ಭಾರತ-ರಷ್ಯಾ 23ನೇ ಶೃಂಗಸಭೆಯಲ್ಲಿ ಪುಟಿನ್ ಜೊತೆಗೆ ಸಂವಾದ ನಡೆಸಿ ಮತ್ತೊಮ್ಮೆ ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸುವಂತೆ ಶಾಂತಿಪಾಠ ಹೇಳಿದರು. ಸಂವಾದದಲ್ಲಿ ಮಾತನಾಡಿದ ಮೋದಿ, ಪುಟಿನ್ ಅವರ ಈ ಭೇಟಿಯು ಐತಿಹಾಸಿಕವಾಗಿದೆ. ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ನಾವು ನಿರಂತರವಾಗಿ ಚರ್ಚಿಸುತ್ತಿದ್ದೇವೆ. ರಷ್ಯಾ ಶಾಂತಿ ಮಾರ್ಗ ಕಂಡುಕೊಳ್ಳಬೇಕಿದೆ. ಏಕೆಂದರೆ ಶಾಂತಿಯ ಮಾರ್ಗದಲ್ಲಿ ಪ್ರಯಾಣಿಸಿದರೆ ಮಾತ್ರ ವಿಶ್ವಕ್ಕೆ ಪ್ರಯೋಜನವಾಗುತ್ತದೆ. ಶಾಂತಿಗಾಗಿ ನಾವು ಎಲ್ಲಾ ಪ್ರಯತ್ನಗಳನ್ನ ಮಾಡುತ್ತೇವೆ ಎಂದರು. ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ ಜಗತ್ತು ಚಿಂತೆಗಳಿಂದ ಮುಕ್ತವಾಗಲಿದೆ, ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ರಷ್ಯಾ ಕೂಡ ಶಾಂತಿಯನ್ನು ಬೆಂಬಲಿಸುತ್ತದೆ. ನಾವು ಕೂಡ ಪ್ರತಿಯೊಂದು ಕ್ಷೇತ್ರದಲ್ಲಿ ಶಾಂತಿಯುತವಾಗಿಯೇ ಸಂಬಂಧಗಳನ್ನು ಕೊಂಡೊಯ್ಯಲು ಬಯಸುತ್ತೇವೆ ಎಂದು ಮೋದಿ ಶಾಂತಿ ಪಾಠ ಮಾಡಿದರು. ಪ್ರಧಾನಿ ಮೋದಿ ಬಳಿಕ ಸಂವಾದದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಪ್ರಧಾನಿ ಮೋದಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
ಭಾರತ ಪ್ರವಾಸದಲ್ಲಿರುವ ಪುಟಿನ್ ಅವರು ರಾಷ್ಟ್ರಪತಿ ಭವನಕ್ಕೆ ಆಗಮಿಸುತ್ತಿದ್ದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ಅದ್ಧೂರಿ ಸಂಗೀತದ ಮೂಲಕ ರೆಡ್ ಕಾರ್ಪೆಟ್ ಹಾಸಿ ಪುಟಿನ್‌ಗೆ ಸ್ವಾಗತ ಕೋರಲಾಯಿತು. ಅಲ್ಲದೇ ಸೇನಾಪಡೆ ಸಿಬ್ಬಂದಿ 21 ಗನ್ ಸೆಲ್ಯೂಟ್, ಮಿಲಿಟರಿ ಶಿಸ್ತು ಮತ್ತು ಸಕಲ ಗೌರವ ಸಲ್ಲಿಸಿದವು.

0 Comments