Ticker

6/recent/ticker-posts

Ad Code

ಅವರಲ್ಲೂ ತುಡಿಯುವ ಮನಸ್ಸಿದೆ.. ಮಿಡಿಯುವ ಹೃದಯವಿದೆ.. ಧೈರ್ಯ ಮತ್ತು ಸ್ಥೈರ್ಯ ನಾವು ತುಂಬಬೇಕಿದೆ

 


ವಿಶ್ಚ ವಿಕಲಚೇತರ ಸ್ಪೂರ್ತಿಗೊಂದು ವಿಶೇಷ ಲೇಖನ

ಡಿಸೆಂಬರ್ 3ನ್ನು ವಿಶೇಷ ಚೇತನ ವ್ಯಕ್ತಿಗಳ ಅಂತರರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಅಂಗವಿಕಲತೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು, ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳು, ಘನತೆ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು, ಹಾಗೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ಆಚರಿಸಲಾಗುತ್ತದೆ. 1992ರಲ್ಲಿ ವಿಶ್ವಸಂಸ್ಥೆಯ ನಿರ್ಣಯದ ಮೂಲಕ ಈ ದಿನವನ್ನು ವಾರ್ಷಿಕ ಆಚರಣೆಯಾಗಿ ಘೋಷಿಸಲಾಯಿತು.

'ವಿಶೇಷ ಚೇತನ' ಎಂದರೆ ದೈಹಿಕ ಅಥವಾ ಮಾನಸಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿ. ಕೆಲವೊಮ್ಮೆ ಜನಿಸುವಾಗಲೇ ಹಲವು ಕಾರಣಗಳಿಂದಾಗಿ  ಅಂಗವೈಕಲ್ಯತೆ ಬರುತ್ತದೆ. ಮತ್ತೆ ಕೆಲವು ಅಪಘಾತವೇ ಮೊದಲಾದ ಕಾರಣಗಳಿಂದ ಉಂಟಾಗುತ್ತದೆ. ಸಂಬಂಧಿಕರು, ಹಿತೈಷಿಗಳು ಅಂತಹ ವ್ಯಕ್ತಿಗಳನ್ನು ಈ ಸ್ಥಿತಿಯಲ್ಲಿ ಮಾನಸಿಕವಾಗಿ ಕುಗ್ಗಲು ಬಿಡದೆ ಅವರಿಗೆ ಧೈರ್ಯ ತುಂಬುವ ಕೆಲಸವನ್ನು  ಮಾಡಬೇಕು. ಅವರಿಗೆ ತಾವು ನಿಷ್ಪ್ರಯೋಜಕರು, ತಮ್ಮಿಂದ ಇತರರಿಗೆ ತೊಂದರೆ ಎಂಬ ಕೀಳರಿಮೆ ಉಂಟಾಗದಂತೆ ನಮ್ಮ ನಡೆನುಡಿ ಇರುವುದು ಸೂಕ್ತ. 

ಇಂತಹ ವ್ಯಕ್ತಿಗಳಿಗೆ ಸರಕಾರವು ವಿವಿಧ ಸೌಲಭ್ಯಗಳು, ಶೈಕ್ಷಣಿಕ ಭತ್ಯೆಗಳು, ಮತ್ತು ಮನೆ ಬಾಗಿಲಿಗೆ ಸರಕಾರಿ ಸೇವೆಗಳನ್ನು ತಲುಪಿಸುವಂತಹ ವಿಶೇಷ ಯೋಜನೆಗಳನ್ನು ಒದಗಿಸುತ್ತದೆ. ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಅರಿವು ಮೂಡಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ. 

ವಿಶೇಷ ಚೇತನರಿಗೆ ಕೇವಲ ಅನುಕಂಪ ತೋರಿಸುವುದು ಈ ದಿನದ ಉದ್ದೇಶವಲ್ಲ, ಬದಲಾಗಿ ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು ಇದರ ಗುರಿಯಾಗಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರತಿಯೊಂದು ಅಂಶದಲ್ಲೂ ವಿಕಲಚೇತನರ ಏಕೀಕರಣದಿಂದ ಆಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.

ಹಿಂದೆ ದೈಹಿಕ ನ್ಯೂನತೆ ಇರುವವರನ್ನು 'ವಿಕಲಾಂಗರು' ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಅವರು 'ವಿಕಲಾಂಗ'ರಲ್ಲ. ಅವರನ್ನು ಗೌರವಯುತವಾಗಿ 'ವಿಕಲಚೇತನರು' (ವಿಶೇಷ ಚೈತನ್ಯವುಳ್ಳವರು) ಅಥವಾ 'ದಿವ್ಯಾಂಗರು' ಎಂದು ಕರೆಯಲಾಗುತ್ತದೆ. ದೈಹಿಕವಾಗಿ ಕೆಲವು ಮಿತಿಗಳಿದ್ದರೂ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಅವರು ಯಾರಿಗೂ ಕಡಿಮೆಯಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ನಮ್ಮ ಸಮಾಜದಲ್ಲಿ ವಿಕಲಚೇತನರು ಇಂದಿಗೂ ಮೂಲಸೌಕರ್ಯಗಳ ಕೊರತೆ, ಶಾಲೆಗಳು, ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವ್ಹೀಲ್ ಚೇರ್ (Wheelchair) ಹೋಗಲು ರ‍್ಯಾಂಪ್‌ಗಳ (Ramps) ವ್ಯವಸ್ಥೆ ಇಲ್ಲದಿರುವುದು,

 ಅರ್ಹತೆ ಇದ್ದರೂ ದೈಹಿಕ ನ್ಯೂನತೆಯ ಕಾರಣಕ್ಕೆ ಉದ್ಯೋಗದಲ್ಲಿ ತಾರತಮ್ಯ ಎದುರಿಸುವುದು,

 ಸಮಾಜವು ಅವರನ್ನು ನೋಡುವ ದೃಷ್ಟಿಕೋನ, ತೋರುವ ತಾತ್ಸಾರ ಇವೇ ಮೊದಲಾದ ಹಲವಾರು  ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅವರಿಗೆ ಮೀಸಲಾತಿ ಮತ್ತು ಪ್ರೋತ್ಸಾಹ ನೀಡುವ,

 ಸಾರ್ವಜನಿಕ ಸಾರಿಗೆ ಮತ್ತು ಕಟ್ಟಡಗಳನ್ನು ವಿಕಲಚೇತನ ಸ್ನೇಹಿಯನ್ನಾಗಿ ಮಾರ್ಪಡಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬಹುದು.

   ಈಗ ಪ್ಯಾರಾಲಿಂಪಿಕ್ಸ್‌ನಂತಹ ಕ್ರೀಡೆಗಳಲ್ಲಿ ಮತ್ತು ಕಲಾ ಕ್ಷೇತ್ರದಲ್ಲಿ ಅವರು ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ. ಅವರೂ ನಮ್ಮಂತೆ ಮನುಷ್ಯರೇ! ಅವರಿಗೂ ಭಾವನೆಗಳಿರುತ್ತವೆ. ಸ್ಪಂದಿಸುವ ಮನಸ್ಸಿರುತ್ತದೆ.. 'ವಿಕಲತೆ ಇರುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ'. ದೃಢ ಸಂಕಲ್ಪವಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಸ್ಟೀಫನ್ ಹಾಕಿಂಗ್, ಸುಧಾ ಚಂದ್ರನ್ ಅವರಂತಹ ಸಾಧಕರೇ ಸಾಕ್ಷಿ.

ನಾವೆಲ್ಲರೂ ಸೇರಿ ತಾರತಮ್ಯವಿಲ್ಲದ, ಎಲ್ಲರನ್ನೂ ಒಳಗೊಳ್ಳುವಂತಹ  ಸುಂದರ ಸಮಾಜವನ್ನು ನಿರ್ಮಿಸೋಣ. ವಿಕಲಚೇತನರ ಬದುಕಿನಲ್ಲಿ ಹೊಸ ಭರವಸೆಯ ಬೆಳಕಾಗೋಣ.


ಲೇಖನ : ವನಜಾಕ್ಷಿ ಪಿ 
ಚೆಂಬ್ರಕಾನ

Post a Comment

0 Comments