"ಗುರುವಿಲ್ಲದ ಅರಿವು ಹಿರಿದಲ್ಲ" ಎಂಬ ನಾಣ್ಣುಡಿಯಂತೆ, ಮನುಷ್ಯನ ವಿಕಾಸದಲ್ಲಿ ಮಾರ್ಗದರ್ಶನದ ಪಾತ್ರ ಅತ್ಯಂತ ದೊಡ್ಡದು. ಪ್ರತಿ ವರ್ಷ ಜನವರಿ 17 ರಂದು ಜಗತ್ತಿನಾದ್ಯಂತ 'ಅಂತರಾಷ್ಟ್ರೀಯ ಮಾರ್ಗದರ್ಶನ ದಿನ'ವನ್ನು ಆಚರಿಸಲಾಗುತ್ತದೆ. ಒಬ್ಬ ಅನುಭವಿ ವ್ಯಕ್ತಿಯು (Mentor) ತನ್ನ ಜ್ಞಾನ ಮತ್ತು ಅನುಭವವನ್ನು ಇನ್ನೊಬ್ಬರಿಗೆ (Mentee) ಧಾರೆ ಎರೆಯುವ ಮೂಲಕ ಅವರ ಜೀವನವನ್ನು ರೂಪಿಸುವ ಪ್ರಕ್ರಿಯೆಯನ್ನು ಈ ದಿನವು ಗೌರವಿಸುತ್ತದೆ. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ಬಲ್ಲವರ ಮಾತು. ಅಂತೆಯೇ ಒಬ್ಬ ಯಶಸ್ವೀ ವ್ಯಕ್ತಿಯ ಹಿಂದೆ ಒಬ್ಬ ಅನುಭವಿ ಮಾರ್ಗದರ್ಶಕ ಇದ್ದೇ ಇರುತ್ತಾರೆ. ಅಂತಹಾ ಮಾರ್ಗದರ್ಶಕನ ಜ್ಞಾನ, ಅನುಭವ ಮತ್ತು ಕೌಶಲಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಕ್ರಿಯೆಯನ್ನು ಗೌರವಿಸಲು ಪ್ರತಿ ವರ್ಷ ಈ 'ಅಂತರಾಷ್ಟ್ರೀಯ ಮಾರ್ಗದರ್ಶನ ದಿನ'ವನ್ನು ಆಚರಿಸಲಾಗುತ್ತದೆ.
ಈ ದಿನವನ್ನು ಮಹಾನ್ ಬಾಕ್ಸರ್ ಮುಹಮ್ಮದ್ ಅಲಿ ಅವರ ಜನ್ಮದಿನದ ನೆನಪಿಗಾಗಿ ಜನವರಿ 17 ರಂದು ಆಚರಿಸಲಾಗುತ್ತದೆ. ಅಲಿ ಅವರು ಕೇವಲ ಕ್ರೀಡಾಪಟುವಾಗಿರದೆ, ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅವರ ಮಾನವೀಯ ಮೌಲ್ಯಗಳು ಮತ್ತು ಇತರರಿಗೆ ಸಹಾಯ ಮಾಡುವ ಗುಣವನ್ನು ಸ್ಮರಿಸುತ್ತಾ ಈ ದಿನವನ್ನು ಜಾಗತಿಕವಾಗಿ ಆಚರಿಸಲು ನಿರ್ಧರಿಸಲಾಯಿತು.
ತನ್ನ ಜೀವನದಲ್ಲಿ ಕಲಿತ ಪಾಠಗಳನ್ನು ಕಿರಿಯರಿಗೆ ತಿಳಿಸಿಕೊಡುವುದು, ಕಿರಿಯರಲ್ಲಿ ಅಥವಾ ಕಲಿಯುವವರಲ್ಲಿ ಇರುವ ಭಯವನ್ನು ಹೋಗಲಾಡಿಸಿ ಅವರಲ್ಲಿ ಭರವಸೆ ತುಂಬುವುದು, ಕೆಲಸದ ಸ್ಥಳದಲ್ಲಿ ಅಥವಾ ಶೈಕ್ಷಣಿಕ ಕ್ಷೇತ್ರದಲ್ಲಿ ಸರಿಯಾದ ಹಾದಿಯನ್ನು ತೋರಿಸುವುದು ಓರ್ವ ಉತ್ತಮ ಮಾರ್ಗದರ್ಶಕನ ಲಕ್ಷಣಗಳು. ಆತ ಕೇವಲ ಆದೇಶ ನೀಡುವವನಲ್ಲ, ಬದಲಾಗಿ ಜೊತೆಯಲ್ಲಿ ನಿಂತು ನಡೆಸುವವನು. ಕಲಿಯುವವರ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವುದು, ತಪ್ಪುಗಳಾದಾಗ ಕುಗ್ಗದಂತೆ ಬೆಂಬಲ ನೀಡುವುದು, ಆಯ್ಕೆಗಳು ಗೊಂದಲಮಯವಾಗಿದ್ದಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುವುದು ಉತ್ತಮ ಮಾರ್ಗದರ್ಶಿಯ ಕರ್ತವ್ಯವೂ ಹೌದು.
ಒಳ್ಳೆಯ ಮಾರ್ಗದರ್ಶನ, ಯಶಸ್ಸಿನ ಮೊದಲ ಮೆಟ್ಟಿಲು. ನಾವು ಕೂಡ ಯಾರಿಗಾದರೂ ಮಾರ್ಗದರ್ಶಕರಾಗುವ ಮೂಲಕ ಅಥವಾ ನಮಗಿಂತ ಹಿರಿಯರಿಂದ ಮಾರ್ಗದರ್ಶನ ಪಡೆಯುವ ಮೂಲಕ ಈ ದಿನವನ್ನು ಸಾರ್ಥಕಗೊಳಿಸಬಹುದು. ಮಾರ್ಗದರ್ಶಕರು ಒಬ್ಬ ವ್ಯಕ್ತಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅದನ್ನು ಹೊರಹಾಕಲು ಪ್ರೇರೇಪಿಸುತ್ತಾರೆ. ಇದು ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸರಿಯಾದ ಸಮಯದಲ್ಲಿ ಸಿಗುವ ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಗೊಂದಲವಿಲ್ಲದೆ ತಮ್ಮ ಗುರಿಯನ್ನು ತಲುಪಲು ಸಹಕಾರಿಯಾಗುತ್ತದೆ.
ಒಬ್ಬ ಉತ್ತಮ ಮಾರ್ಗದರ್ಶಕನು ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ನೀಡುತ್ತಾನೆ. ಜ್ಞಾನವು ಹಂಚಿದಷ್ಟೂ ಬೆಳೆಯುತ್ತದೆ ಎಂಬ ತತ್ವದ ಮೇಲೆ ಇದು ನಿಂತಿದೆ. ಒಬ್ಬ ಉತ್ತಮ ಮಾರ್ಗದರ್ಶಕ ಎಂದರೆ ಕೇವಲ ಜ್ಞಾನವಂತನಷ್ಟೇ ಅಲ್ಲ, ಬದಲಾಗಿ ತಾಳ್ಮೆಯುಳ್ಳವನಾಗಿರಬೇಕು. ಕಲಿಯುವವರ ತಪ್ಪುಗಳನ್ನು ತಿದ್ದಿ, ಅವರನ್ನು ಪ್ರೀತಿಯಿಂದ ಸನ್ಮಾರ್ಗಕ್ಕೆ ತರುವ ಗುಣ ಅವರಲ್ಲಿರಬೇಕು. ಕಲಿಯುವವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಅವರಿಗೆ ಬೆನ್ನೆಲುಬಾಗಿ ನಿಲ್ಲುವುದು ಮಾರ್ಗದರ್ಶನದ ಮುಖ್ಯ ಲಕ್ಷಣ.
ಇಂದಿನ ವೇಗದ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ, ಒಬ್ಬ ಮನುಷ್ಯನಿಂದ ಸಿಗುವ ವೈಯಕ್ತಿಕ ಮಾರ್ಗದರ್ಶನಕ್ಕೆ ಸಾಟಿಯಿಲ್ಲ. ಯುವಜನತೆಯನ್ನು ಸನ್ಮಾರ್ಗದಲ್ಲಿ ನಡೆಸಲು, ಸಮಾಜದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಮತ್ತು ಶೈಕ್ಷಣಿಕ ಅಸಮಾನತೆಯನ್ನು ಹೋಗಲಾಡಿಸಲು ಈ ದಿನವು ಪ್ರೇರಣೆ ನೀಡುತ್ತದೆ. ಜೀವನ ಎಂಬ ಸಮುದ್ರದಲ್ಲಿ ದಾರಿ ತಪ್ಪದಂತೆ ನಡೆಸುವ ದೋಣಿಯೇ ಮಾರ್ಗದರ್ಶನ. ನಾವು ಜೀವನದಲ್ಲಿ ಕೇವಲ ಮಾರ್ಗದರ್ಶನ ಪಡೆಯುವುದಷ್ಟೇ ಅಲ್ಲದೆ, ನಮಗಿಂತ ಕಿರಿಯರಿಗೆ ಅಥವಾ ಅಗತ್ಯವಿರುವವರಿಗೆ ಒಳ್ಳೆಯ ದಾರಿಯನ್ನು ತೋರಿಸುವ ಮಾರ್ಗದರ್ಶಕರಾಗಬೇಕು. ಅಂದಾಗ ಮಾತ್ರ ಸಮಾಜವು ಸುಶಿಕ್ಷಿತವಾಗಿ ಮತ್ತು ಸುಸಂಸ್ಕೃತವಾಗಿ ಬೆಳೆಯಲು ಸಾಧ್ಯ. ಈ ದಿನದಂದು ಅನೇಕ ಸಂಸ್ಥೆಗಳು, ಶಾಲಾ-ಕಾಲೇಜುಗಳು ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸುತ್ತವೆ. ಅನುಭವಿ ವ್ಯಕ್ತಿಗಳು ಯುವಜನತೆಯೊಂದಿಗೆ ಸಂವಾದ ನಡೆಸಿ ತಮ್ಮ ಜೀವನದ ಏರಿಳಿತಗಳನ್ನು ಹಂಚಿಕೊಳ್ಳುತ್ತಾರೆ. "ನಾನು ಒಬ್ಬರಿಗೆ ದಾರಿದೀಪವಾಗುತ್ತೇನೆ" ಎಂಬ ಸಂಕಲ್ಪ ಮಾಡುವುದೇ ಈ ದಿನದ ನಿಜವಾದ ಆಚರಣೆ.
ಸಂಗ್ರಹ ಲೇಖನ

0 Comments