ಬದಿಯಡ್ಕ: 12 ವರ್ಷಗಳಿಂದ ಆಧಾರ್ ಕಾರ್ಡ್ ಪಡೆಯಬೇಕೆಂದು ವಿವಿಧ ಅಕ್ಷಯ ಕೇಂದ್ರಗಳನ್ನು ಸುತ್ತಿದರೂ ಅಸೌಖ್ಯದಲ್ಲಿರುವ ಪತ್ನಿಗೆ ಆಧಾರ್ ಕಾರ್ಡ್ ದೊರಕಿಸಿಕೊಡುವಲ್ಲಿ ನೀರ್ಚಾಲು ಸಮೀಪದ ಕುಂಟಿಕಾನ ಮಾಳಿಗೆ ಮನೆಯ 75 ವರ್ಷ ಪ್ರಾಯದ ಕೃಷಿಕ ಶ್ರೀಕೃಷ್ಣ ಭಟ್ಟರಿಗೆ ಸಾಧ್ಯವಾಗಲೇ ಇಲ್ಲ. 68 ವರ್ಷದ ಪತ್ನಿ ಹೇಮಾವತಿ ಅವರಿಗೆ ಒಂದು ಕಣ್ಣು ಪೂರ್ಣವಾಗಿ ಮುಚ್ಚಿಹೋಗಿದ್ದು ಮತ್ತೊಂದು ಕಣ್ಣಿಗೆ ದೃಷ್ಟಿದೋಷವಿದೆ. ಕೈಬೆರಳುಗಳ ರೇಖೆಗಳೂ ಮಾಸಿಹೋದ ಕಾರಣವೋ ಏನೋ ಅವರ ಬೆರಳಚ್ಚನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಗಳಿಂದಾಗಿ ಅವರ ಆಧಾರ್ ಅರ್ಜಿ ಪದೇಪದೇ ತಿರಸ್ಕರಿಸಲ್ಪಡುತ್ತಿತ್ತು. ಸೀತಾಂಗೋಳಿ, ನೀರ್ಚಾಲು, ಕೊಲ್ಲಂಗಾನ ಮೊದಲಾದೆಡೆಗಳಲ್ಲಿ ಅಕ್ಷಯಕೇಂದ್ರಗಳನ್ನು ಸಂಪರ್ಕಿಸಿದಾಗಲೂ ಒಂದೇ ಉತ್ತರ ಇವರಿಗೆ ಲಭಿಸುತ್ತಿತ್ತು. ಇವರಿಗೆ ಯಾವುದೇ ಪೆನ್ಶನ್ ಆಗಲೀ, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಅಡ್ಡಿಬರುತ್ತಿತ್ತು.
ಈ ವಿಚಾರವನ್ನು ತಿಳಿದ ಬದಿಯಡ್ಕದ ಶಾಲೆಯೊಂದರ ಅಧ್ಯಾಪಕರು ತಮ್ಮ ಮಲಯಾಳಂ ಪತ್ರಿಕೆಯಲ್ಲಿ ಇವರ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದರು. ಇದನ್ನು ಗಮನಿಸಿ ಆಧಾರ್ ರಾಜ್ಯ ಕಛೇರಿಯಿಂದ ಇವರನ್ನು ಸಂಪರ್ಕಿಸಿ ಆಧಾರ್ ಕಾರ್ಡ್ ನೊಂದಾವಣೆಗಿರುವ ತೊಂದರೆಗಳನ್ನು ನಿವಾರಿಸಿದರು. ನಂತರ ತಿರುವನಂತಪುರದಿಂದ ಸಂಬಂಧಪಟ್ಟ ಅಧಿಕಾರಿಗಳು ಬದಿಯಡ್ಕ ಗ್ರಾಮ ಪಂಚಾಯಿತಿಯ ಇವರನ್ನು ಸಂಪರ್ಕಿಸಿ ಆಧಾರ್ ಕಾರ್ಡ್ ಗಿರುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿದರು. ಆಧಾರ್‌ಕಾರ್ಡನ್ನು ಹೇಮಾವತಿ ಅವರ ಮನೆಗೆ ತೆರಳಿ ನೀಡಲಾಯಿತು. ಗ್ರಾಮಪಂಚಾಯತು ಅಧ್ಯಕ್ಷ ಶಂಕರ.ಡಿ. ಹಾಗೂ ನೀರ್ಚಾಲು ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಆಧಾರ್ ಕಾರ್ಡ್ ಹಸ್ತಾಂತರಿಸಿದರು. ಗ್ರಾಮಪಂಚಾಯಿತಿ ಸದಸ್ಯ ಹರೀಶ ಎ., ಅಧ್ಯಾಪಕ ಉಣ್ಣಿಕೃಷ್ಣನ್, ಶಾಲಾ ಸಿಬ್ಬಂದಿಗಳಾದ ಕೃಷ್ಣ ಪೆರಡಾಲ, ಬಿಎಲ್‌ಒ ಯಜ್ಞೇಶ ಈಳಂತೋಡಿ ಹಾಗೂ ಇತರರು ಭಾಗವಹಿಸಿದರು

0 Comments