Ticker

6/recent/ticker-posts

Ad Code

ಅಂಟಿಸುವ ಸಂಭ್ರಮ: ಸೃಜನಶೀಲತೆಯ ಸಂಕೇತ

 

ನಮ್ಮ ದೈನಂದಿನ ಜೀವನದಲ್ಲಿ ಅತಿ ಸಣ್ಣದಾಗಿ ಕಂಡರೂ, ಅತಿ ಹೆಚ್ಚು ಪ್ರಭಾವ ಬೀರುವ ವಸ್ತುಗಳಲ್ಲಿ 'ಸ್ಟಿಕ್ಕರ್' ಕೂಡ ಒಂದು. ಮಕ್ಕಳ ಆಟದ ಸಾಮಾನುಗಳಿಂದ ಹಿಡಿದು ದೊಡ್ಡ ಕಂಪನಿಗಳ ಬ್ರ್ಯಾಂಡಿಂಗ್‌ವರೆಗೆ ಎಲ್ಲೆಡೆ ಸ್ಟಿಕ್ಕರ್‌ಗಳ ಬಳಕೆ ಇದೆ. ಇಂತಹ ಸ್ಟಿಕ್ಕರ್‌ಗಳ ಇತಿಹಾಸ ಮತ್ತು ಅವುಗಳ ಮಹತ್ವವನ್ನು ಸ್ಮರಿಸಲು ಪ್ರತಿ ವರ್ಷ ಜನವರಿ 13 ರಂದು 'ರಾಷ್ಟ್ರೀಯ ಸ್ಟಿಕ್ಕರ್ ದಿನ'ವನ್ನು ಆಚರಿಸಲಾಗುತ್ತದೆ.

ಸ್ಟಿಕ್ಕರ್‌ಗಳ ಇತಿಹಾಸವು ಸಾವಿರಾರು ವರ್ಷಗಳ ಹಿಂದಿನ ಈಜಿಪ್ಟ್ ಸಂಸ್ಕೃತಿಯಲ್ಲಿ ಬೇರು ಬಿಟ್ಟಿದೆ ಎಂದು ಹೇಳಲಾಗುತ್ತದೆ. ಆಗ ವ್ಯಾಪಾರಿಗಳು ಕಾಗದದ ಮೇಲೆ ಬೆಲೆಗಳನ್ನು ಬರೆದು, ಗೋಂದಿನಂತಹ ಪದಾರ್ಥಗಳನ್ನು ಬಳಸಿ ವಸ್ತುಗಳಿಗೆ ಅಂಟಿಸುತ್ತಿದ್ದರು,  ಈಜಿಪ್ಟ್‌ನ ವ್ಯಾಪಾರಿಗಳು ತಮ್ಮ ವಸ್ತುಗಳ ಬೆಲೆ ಪಟ್ಟಿಗಳನ್ನು ಅಂಟಿಸಲು ಪೇಪರ್ ತುಣುಕುಗಳನ್ನು ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. 1880ರ ದಶಕದಲ್ಲಿ ಯುರೋಪಿನ ವ್ಯಾಪಾರಿಗಳು ತಮ್ಮ ಉತ್ಪನ್ನಗಳ ಮೇಲೆ ಅಂಟು ಬಳಸಿ ಲೇಬಲ್‌ಗಳನ್ನು ಹಚ್ಚಲು ಪ್ರಾರಂಭಿಸಿದರು. ಮೊದಲಿಗೆ ಸ್ಟಿಕ್ಕರ್‌ಗಳನ್ನು ಕೇವಲ ಬೆಲೆ ಪಟ್ಟಿಗಳಾಗಿ ಅಥವಾ ಕಾರ್ಖಾನೆಗಳಲ್ಲಿ ಲೇಬಲ್‌ಗಳಾಗಿ ಬಳಸಲಾಗುತ್ತಿತ್ತು. 1940ರ ದಶಕದ ನಂತರ ಅಮೆರಿಕದಲ್ಲಿ ವಾಹನಗಳ ಬಂಪರ್‌ಗಳ ಮೇಲೆ ರಾಜಕೀಯ ಅಥವಾ ವ್ಯಕ್ತಿತ್ವದ ಸಂದೇಶಗಳನ್ನು ಅಂಟಿಸುವ 'ಬಂಪರ್ ಸ್ಟಿಕ್ಕರ್' ಸಂಸ್ಕೃತಿ ಆರಂಭವಾಯಿತು. 1980 ಮತ್ತು 90ರ ದಶಕದಲ್ಲಿ ಬಣ್ಣದ ಚಿತ್ರಗಳುಳ್ಳ, ಸುಗಂಧಭರಿತ (Scratch and Sniff) ಸ್ಟಿಕ್ಕರ್‌ಗಳು ಮಕ್ಕಳಲ್ಲಿ ಅತೀವ ಜನಪ್ರಿಯತೆ ಗಳಿಸಿದವು.

1935ರಲ್ಲಿ ಸ್ಟಾಂಟನ್ ಏವರಿ ಅವರು ಮೊದಲ ಬಾರಿಗೆ ಸುಲಭವಾಗಿ ಬಿಡಿಸಬಹುದಾದ ಹಿಂಭಾಗದ ಕಾಗದವನ್ನು ಹೊಂದಿದ ಸ್ಟಿಕ್ಕರ್ ಕಂಡುಹಿಡಿದರು. ಇವರ ಈ ಆವಿಷ್ಕಾರವು ವ್ಯಾಪಾರ ಮತ್ತು ಕಲೆಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತು. ಆಧುನಿಕ ಸ್ಟಿಕ್ಕರ್ ಪ್ರಪಂಚದ ಪಿತಾಮಹ ಎಂದೇ ಕರೆಯಲ್ಪಡುವ ಆರ್. ಸ್ಟಾಂಟನ್ ಏವರಿ  ಅವರ ಜನ್ಮದಿನದ ನೆನಪಿಗಾಗಿ  ಜನವರಿ 13ರನ್ನು ಸ್ಟಿಕ್ಕರ್ ದಿನವಾಗಿ ಆಚರಿಸಲಾಗುತ್ತಿದೆ. 2015 ರಲ್ಲಿ 'ಸ್ಟಿಕ್ಕರ್ ಜೈಂಟ್' ಎಂಬ ಕಂಪನಿಯು ಈ ದಿನಾಚರಣೆಯನ್ನು ಅಧಿಕೃತವಾಗಿ ಆರಂಭಿಸಿತು.

ಸ್ಟಿಕ್ಕರ್‌ಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ, ಅವು ನಮ್ಮ ವ್ಯಕ್ತಿತ್ವ ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸುವ ಸುಲಭ ಮಾರ್ಗಗಳಾಗಿವೆ. ನಮ್ಮ ನೋಟ್‌ಬುಕ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ಮನೆಯ ಗೋಡೆಗಳ ಮೇಲೆ ಅಂಟಿಸಿರುವ ಪುಟ್ಟ ಸ್ಟಿಕ್ಕರ್‌ಗಳು ಕೇವಲ ಕಾಗದದ ತುಣುಕುಗಳಲ್ಲ; ಅವು ಸೃಜನಶೀಲತೆಯ ಸಂಕೇತ. ಸ್ಟಿಕ್ಕರ್‌ಗಳು ಇಂದು ಕೇವಲ ಮಕ್ಕಳ ಆಟದ ವಸ್ತುವಾಗಿ ಉಳಿದಿಲ್ಲ. ಅವುಗಳ ಬಳಕೆ ವಿಸ್ತಾರವಾಗಿದೆ. ಜನರು ತಮ್ಮ ಹವ್ಯಾಸಗಳು, ಸಿದ್ಧಾಂತಗಳು ಅಥವಾ ನೆಚ್ಚಿನ ಬ್ರ್ಯಾಂಡ್‌ಗಳನ್ನು ತಮ್ಮ ವಸ್ತುಗಳ ಮೇಲೆ ಸ್ಟಿಕ್ಕರ್ ಹಚ್ಚುವ ಮೂಲಕ ವ್ಯಕ್ತಪಡಿಸುತ್ತಾರೆ. ಕಂಪನಿಗಳು ತಮ್ಮ ಲೋಗೋಗಳನ್ನು ಮತ್ತು ಸಂದೇಶಗಳನ್ನು ಜನರಿಗೆ ತಲುಪಿಸಲು ಸ್ಟಿಕ್ಕರ್‌ಗಳನ್ನು ಅತ್ಯಂತ ಅಗ್ಗದ ಮತ್ತು ಪರಿಣಾಮಕಾರಿ ಸಾಧನವಾಗಿ ಬಳಸುತ್ತವೆ.

ಕಚೇರಿಗಳಲ್ಲಿ ಮತ್ತು ಮನೆಗಳಲ್ಲಿ ವಸ್ತುಗಳನ್ನು ವರ್ಗೀಕರಿಸಲು ಲೇಬಲ್ ಸ್ಟಿಕ್ಕರ್‌ಗಳು ಬಹಳ ಸಹಕಾರಿ. ಕಾಲ ಬದಲಾದಂತೆ ಸ್ಟಿಕ್ಕರ್‌ಗಳ ರೂಪವೂ ಬದಲಾಗಿದೆ. ಕಾಗದ, ವಿನೈಲ್ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಸ್ಟಿಕ್ಕರ್‌ಗಳು. ಇವುಗಳನ್ನು ವಾಹನಗಳು, ಲ್ಯಾಪ್‌ಟಾಪ್ ಮತ್ತು ಪುಸ್ತಕಗಳ ಮೇಲೆ ಬಳಸಲಾಗುತ್ತದೆ. ಇಂದು ನಾವು ವಾಟ್ಸಾಪ್ ಟೆಲಿಗ್ರಾಮ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಡಿಜಿಟಲ್ ಸ್ಟಿಕ್ಕರ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದೇವೆ. ಮಾತುಗಳಲ್ಲಿ ಹೇಳಲಾಗದ ಭಾವನೆಗಳನ್ನು ಒಂದು ಪುಟ್ಟ ಸ್ಟಿಕ್ಕರ್ ಮೂಲಕ ವ್ಯಕ್ತಪಡಿಸುವುದು ಇಂದಿನ ಯುವ ಪೀಳಿಗೆಯ ಹೊಸ ಟ್ರೆಂಡ್ ಆಗಿದೆ.

ಮಕ್ಕಳಿಗೆ ಸ್ಟಿಕ್ಕರ್‌ಗಳು ಕಲ್ಪನಾ ಲೋಕವನ್ನು ತೆರೆಯುತ್ತವೆ. ಚಿತ್ರಕಲೆ ಮತ್ತು ಕರಕುಶಲ ಕೆಲಸಗಳಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಕಚೇರಿಗಳಲ್ಲಿ ಕಡತಗಳನ್ನು ಗುರುತಿಸಲು, ವಸ್ತುಗಳ ಬೆಲೆ ಪಟ್ಟಿ ಹಾಕಲು ಮತ್ತು ಎಚ್ಚರಿಕೆಯ ಸಂದೇಶಗಳನ್ನು ನೀಡಲು (ಉದಾಹರಣೆಗೆ: 'Danger' ಅಥವಾ 'Fragile') ಸ್ಟಿಕ್ಕರ್‌ಗಳು ಅತ್ಯಗತ್ಯ. ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಜನರನ್ನು ತಲುಪಲು ಕಂಪನಿಗಳು ಸ್ಟಿಕ್ಕರ್‌ಗಳನ್ನು ಪ್ರಚಾರದ ಸಾಧನವಾಗಿ ಬಳಸುತ್ತವೆ.

ಈ ದಿನದ ಮುಖ್ಯ ಉದ್ದೇಶವೆಂದರೆ ಜನರಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದು. ಕಲೆ ಕೇವಲ ಕ್ಯಾನ್ವಾಸ್ ಮೇಲೆ ಮಾತ್ರವಲ್ಲ, ಸಣ್ಣ ಸ್ಟಿಕ್ಕರ್ ಮೂಲಕವೂ ವ್ಯಕ್ತವಾಗಬಹುದು ಎಂಬುದನ್ನು ಇದು ನೆನಪಿಸುತ್ತದೆ. ಅಲ್ಲದೆ, ಸಂಗ್ರಹಕಾರರಿಗೆ ತಮ್ಮ ಸ್ಟಿಕ್ಕರ್ ಸಂಗ್ರಹವನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆ. ಜಗತ್ತಿನಲ್ಲಿ ಸಂವಹನಕ್ಕೆ ಭಾಷೆ ಎಷ್ಟು ಮುಖ್ಯವೋ, ದೃಶ್ಯ ಮಾಧ್ಯಮವೂ ಅಷ್ಟೇ ಮುಖ್ಯ. ಅಂತಹ ದೃಶ್ಯ ಮಾಧ್ಯಮಗಳಲ್ಲಿ 'ಸ್ಟಿಕ್ಕರ್' ಅತ್ಯಂತ ಸರಳ ಹಾಗೂ ಆಕರ್ಷಕವಾದದ್ದು. ಪ್ರತಿ ವರ್ಷ ಜನವರಿ 13 ರಂದು ಆಚರಿಸಲಾಗುವ ರಾಷ್ಟ್ರೀಯ ಸ್ಟಿಕ್ಕರ್ ದಿನವು ಈ ಪುಟ್ಟ ಕಲಾಕೃತಿಗಳ ಹಿಂದಿರುವ ವಿಜ್ಞಾನ, ಕಲೆ ಮತ್ತು ಇತಿಹಾಸವನ್ನು ಜನರಿಗೆ ಪರಿಚಯಿಸುವ ಗುರಿಯನ್ನು ಹೊಂದಿದೆ. ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ನೋಟ್‌ಬುಕ್‌ಗಳ ಮೇಲೆ 'Star' ಅಥವಾ 'Good' ಸ್ಟಿಕ್ಕರ್ ಅಂಟಿಸುವುದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸ್ಟಿಕ್ಕರ್ ಸಂಗ್ರಹಿಸುವ ಹವ್ಯಾಸವು ಮಕ್ಕಳಲ್ಲಿ ವ್ಯವಸ್ಥಿತವಾಗಿ ವಸ್ತುಗಳನ್ನು ಜೋಡಿಸುವ ಮತ್ತು ತಾಳ್ಮೆಯ ಗುಣವನ್ನು ಬೆಳೆಸುತ್ತದೆ.

 ಒಂದು  ಸ್ಟಿಕ್ಕರ್ ತನ್ನ ಅಂಟಿನ ಗುಣದಿಂದ ಹೇಗೆ ವಸ್ತುವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆಯೋ, ಹಾಗೆಯೇ ಅದು ಜನರ ನೆನಪುಗಳನ್ನು ಮತ್ತು ಭಾವನೆಗಳನ್ನು ಕೂಡ ಅಂಟಿಸಿಡುತ್ತದೆ. ಇಂದಿನ ವೇಗದ ಡಿಜಿಟಲ್ ಯುಗದಲ್ಲೂ ಭೌತಿಕ ಸ್ಟಿಕ್ಕರ್‌ಗಳ ಮೋಡಿ ಕಡಿಮೆಯಾಗಿಲ್ಲ. ಜನವರಿ 13ರ ಈ ದಿನದಂದು ನಾವೆಲ್ಲರೂ ನಮ್ಮ ನೆಚ್ಚಿನ ಸ್ಟಿಕ್ಕರ್ ಅನ್ನು ಅಂಟಿಸುವ ಮೂಲಕ ಸೃಜನಶೀಲತೆಯನ್ನು ಗೌರವಿಸೋಣ. ಒಂದು ಪುಟ್ಟ ಸ್ಟಿಕ್ಕರ್ ಮುಖದಲ್ಲಿ ನಗು ತರಬಲ್ಲದು ಅಥವಾ ಒಂದು ದೊಡ್ಡ ಸಂದೇಶವನ್ನು ಸಾರಬಲ್ಲದು. ಈ ರಾಷ್ಟ್ರೀಯ ಸ್ಟಿಕ್ಕರ್ ದಿನದಂದು, ನಮ್ಮ ಸುತ್ತಲಿನ ಬಣ್ಣಬಣ್ಣದ ಸ್ಟಿಕ್ಕರ್‌ಗಳನ್ನು ಗಮನಿಸೋಣ ಮತ್ತು ಆ ಮೂಲಕ ನಮ್ಮ ಸೃಜನಶೀಲತೆಯನ್ನು ಸಂಭ್ರಮಿಸೋಣ. ನೆಚ್ಚಿನ ಸ್ಟಿಕ್ಕರ್‌ಗಳನ್ನು ಸಂಗ್ರಹಿಸಿ ಅಥವಾ ಹೊಸ ಸ್ಟಿಕ್ಕರ್‌ಗಳನ್ನು ಖರೀದಿಸಿ, ಸ್ನೇಹಿತರಿಗೆ ಅಥವಾ ಮಕ್ಕಳಿಗೆ ಸ್ಟಿಕ್ಕರ್‌ಗಳನ್ನು ಉಡುಗೊರೆಯಾಗಿ ನೀಡಿ ಈ ದಿನದ ಮಹತ್ವವನ್ನು ಸ್ಮರಿಸಬಹುದು.

ಸಂಗ್ರಹ ಲೇಖನ - ವನಜಾಕ್ಷಿ ಪಿ ಚೆಂಬ್ರಕಾನ

Post a Comment

0 Comments