ವಿಟ್ಲ: ಧರ್ಮತ್ತಡ್ಕ ಪರಿಸರದಿಂದ ಯಾವುದೇ ದಾಖಲೆ ಪತ್ರಗಳಿಲ್ಲದೇ ಕರ್ನಾಟಕದ ವಿಟ್ಲ ಕಡೆಗೆ ಕೆಂಪುಕಲ್ಲುಗಳನ್ನು ಹೇರಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದರು. ಕೇರಳ ಕರ್ನಾಟಕ ಗಡಿಭಾಗದ ಪೆರುವಾಯಿ ಸಮೀಪದ ಬೆರಿಪದವು ಎಂಬಲ್ಲಿ ವಿಟ್ಲ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಲಾರಿ ಸಹಿತ ಕೆಂಪು ಕಲ್ಲುಗಳನ್ನು ವಶಪಡಿಸಲಾಗಿದೆ. ಲಾರಿ ಚಾಲಕರಾದ ವಿಟ್ಲ ನಿವಾಸಿ ಸಾದೀಖ್ (25) ಹಾಗೂ ವಿಟ್ಲದ ಮೊಹ್ಮದ್ (46) ಎಂಬಿವರನ್ನು ವಶಕ್ಕೆ ತೆಗೆಯಲಾಗಿದೆ. ತಾವು ಕೇವಲ ಚಾಲಕರಾಗಿದ್ದು, ಧರ್ಮತಡ್ಕದ ವ್ಯಕ್ತಿಯೊಬ್ಬರು ಕಲ್ಲಿನಕೋರೆಯಿಂದ ತುಂಬಿಸಿ ಕಳುಹಿಸಿದ ಲೋಡ್ ಇದೆಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಧರ್ಮತ್ತಡ್ಕದ ಗುಂಪೆ ಗುಡ್ಡೆಯ ತಪ್ಪಲಲ್ಲಿ ಕಲ್ಲಿನಕೋರೆಗಳಿದ್ದು, ಇಲ್ಲಿಂದ ಅನಧಿಕೃತವಾಗಿ ಕರ್ನಾಟಕಕ್ಕೆ ಬೆರಿಪದವು ಮೂಲಕ ವ್ಯಾಪಕ ಕೆಂಪುಕಲ್ಲು ಸಾಗಾಟವಾಗುತ್ತಿದೆ ಎಂದು ನಾಗರಿಕರು ಈ ಹಿಂದೆಯೇ ತಿಳಿಸಿದ್ದಾರೆ. ಪ್ರಸ್ತುತ ಕಲ್ಲಿನ ಕೋರೆಗಳಿಂದ ಪೊಸಡಿಗುಂಪೆ ಬೆಟ್ಟಕ್ಕೆ ಅಪಾಯದ ಆತಂಕಗಳಿವೆ ಎಂದು ಸೂಚಿಸಿದ್ದರೂ ಇಲ್ಲಿನ ಗ್ರಾಮಾಧಿಕಾರಿ ಸಹಿತ ಉನ್ನತಾಧಿಕಾರಿಗಳು ಲಂಚ ಗಿಟ್ಟಿಸಿಕೊಂಡು ಕೈ ಕಟ್ಟಿ ಕುಳಿತಿರುವುದೇ ಅವ್ಯಾಹತವಾಗಿ ಕಲ್ಲು ಸಾಗಣಿಕೆಗೆ ಕಾರಣವಾಗಿದೆ ಎಂದು ನಾಗರಿಕರು ಹೇಳುತ್ತಾರೆ. ಧರ್ಮತ್ತಡ್ಕ ಪರಿಸರದ ಅನಧಿಕೃತ ಕೆಂಪುಕಲ್ಲು ಗಣಿಗಾರಿಕೆ ಮತ್ತು ಸಾಗಾಟ ಈ ಪ್ರದೇಶದಲ್ಲಿ ಗಂಭೀರ ಧೂಳಿನ ಸಮಸ್ಯೆ ಸೃಷ್ಟಿಸಿರುವುದಾಗಿಯೂ ದೂರಲಾಗಿದೆ.

0 Comments