ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಚೈತ್ರಾರ ಮನೆಯಿಂದ 29 ಪವನ್ ಚಿನ್ನ ಹಾಗೂ 25 ಸಾವಿರ ರೂ. ಮೌಲ್ಯದ ಬೆಳ್ಳಿ ಹಾಗೂ ಐದು ಸಾವಿರ ರೂ. ಕಳವುಗೈದ ಪ್ರಕರಣದ ಆರೋಪಿ ಇಬ್ರಾಹಿಂ ಕಲಂದರ್‌ನನ್ನು ಕುಂಬಳೆ ಎಸ್‌ಐಯ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕಳವುಗೈದ ಚಿನ್ನ ಪತ್ತೆಹಚ್ಚಲು ಹಾಗೂ ಇದರಲ್ಲಿ ಇತರ ಆರೋಪಿಗಳಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲು ಆರೋಪಿಯನ್ನು ಕಸ್ಟಡಿಗೆ ನೀಡಬೇಕೆಂದು ಆಗ್ರಹಿಸಿ ಎಸ್‌ಐ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದರಂತೆ ಈತನನ್ನು ನಾಲ್ಕು ದಿನಕ್ಕೆ ಕಸ್ಟಡಿಗೆ ನೀಡಲಾಗಿದೆ. ಈ ನಡುವೆ ಬಾಡೂರು ಪದವಿನಲ್ಲಿ ನಡೆದ ಸರಣಿ ಅಂಗಡಿ ಕಳವಿನಲ್ಲಿ ಈತ ಭಾಗಿಯಾಗಿರಬೇಕೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದು ವಿಚಾರಣೆ ನಡೆಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ದೇಲಂಪಾಡಿ ಕ್ಷೇತ್ರ ಧನುಮಾಸದಲ್ಲಿ ಧನುಪೂಜೆಯ ಬೆಳಗ್ಗಿನ ಸಂದರ್ಭ ಈತನನ್ನು ಬಾಡೂರಿನಲ್ಲಿ ಬೆಳ್ಳಂಬೆಳಗ್ಗೆ ಕಂಡವರಿದ್ದು ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಪೋಲಿಸರು ವಿಚಾರಣೆ ನಡೆಸಿದರಷ್ಟೆ ಸತ್ಯ ಹೊರ ಬರಲು ಸಾಧ್ಯ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಜನವರಿ 18ರಂದು ಸಂಜೆ 6 ಗಂಟೆ ಹಾಗೂ ರಾತ್ರಿ 8 ಗಂಟೆ ಮಧ್ಯೆ ಕಳವು ನಡೆಸಲಾಗಿತ್ತು. ಈ ಸಮಯದಲ್ಲಿ ಚೈತ್ರ ಹಾಗೂ ಕುಟುಂಬ ಉತ್ಸವಕ್ಕೆಂದು ತೆರಳಿದ್ದರು. ಹಿಂತಿರುಗಿದಾಗ ಮನೆಯ ಹಿಂಭಾಗದ ಬಾಗಿಲು ಮುರಿದು ಒಳನುಗ್ಗಿ ಕಪಾಟಿನಲ್ಲಿ ಚಿನ್ನಾಭರಣ ಹಾಗೂ ನಗದು ಕಳವುಗೈದಿರುವುದು ತಿಳಿದುಬಂ ದಿತ್ತು. ಪೊಲೀಸರು ನಡೆಸಿದ ತನಿಖೆ ಯಲ್ಲಿ ಪ್ರಧಾನ ಆರೋಪಿ ಇಬ್ರಾಹಿಂ ಕಲಂದರ್‌ನನ್ನು ದಿನಗಳೊಳಗೆ ಬಂಧಿಸಿದ್ದರು. ಕಳವುಹೋದ ಚಿನ್ನಾಭರಣದಲ್ಲಿ ಅಲ್ಪಪ್ರಮಾಣದ ಚಿನ್ನವನ್ನು ಪತ್ತೆಹಚ್ಚಲಾಗಿದ್ದು, ಉಳಿದ ಚಿನ್ನದ ಪತ್ತೆ ಹಾಗೂ ಉಳಿದ ಆರೋಪಿಗಳ ಪತ್ತೆ ಬಾಕಿ ಉಳಿದಿದೆ.

0 Comments