ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿಗೊಳಪಡುವ ಪೂವನಡ್ಕ ಹೊಳೆಗೆ ಪೆಲ್ತಾಜೆಯಲ್ಲಿ ಕೃಷಿ ನೀರಾವರಿಗೆ ಯೋಗ್ಯವಾಗುವ ರೀತಿಯಲ್ಲಿ ಕಿರು ಅಣೆಕಟ್ಟು ಜತೆಗೆ ಸೇತುವೆ ನಿರ್ಮಿಸುವ ಯೋಜನೆಗಾಗಿ ಇರಿಗೇಶನ್ ಇಲಾಖೆಯ ಇಂಜಿನಿಯರ್ ಸ್ಥಳ ಪರಿಶೋಧನೆ ನಡೆಸಿದರು. ಕೃಷಿ ಸ್ಥಳಗಳೇ ತುಂಬಿರುವ ಇಲ್ಲಿನ ಕೃಷಿಕರಿಗೆ ಬಹುಪಯೋಗಿಯಾಗುವ ಈ ಯೋಜನೆ ಜ್ಯಾರಿಗೊಂಡರೆ ನಾಡಿಗೆ ಪ್ರಯೋಜನವಾದಂತಾಗುತ್ತದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಪೆರ್ಲದಿಂದ ಬಜಕೂಡ್ಲು ಕುರೆಡ್ಕ, ಬೇಂಗಪದವು ಮೂಲಕ ಪೂವನಡ್ಕ ಹೊಳೆ ದಾಟಿ ನೆರೆಯ ಕರ್ನಾಟಕದ ಮಾಣಿಲ ಗ್ರಾಮದ ತಾರಿದಳ, ಕಾಮಜಲು, ಪೆರುವಾಯಿ ಮೊದಲಾದೆಡೆಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಮಳೆಗಾಲ ಕಳೆದ ಕೂಡಲೇ ಬೇಸಿಗೆಯಲ್ಲಿ ಹೊಳೆಯಲ್ಲಿ ನೀರು ಬತ್ತುವುದರಿಂದ ಎರಡು ಬದಿಗೂ ಹೊಳೆಗಿಳಿದು ಸಂಪರ್ಕಿಸಬಹುದಾಗಿದೆ. ಈ ಹಿಂದೆ ಪುತ್ತೂರು ಶಕುಂತಳ ಶೆಟ್ಟಿ ಶಾಸಕಿಯಾಗಿರುವ ವೇಳೆ ಈ ಸೇತುವೆ ಸಂಪರ್ಕದ ಬಗ್ಗೆ ಜನರು ಅವರ ಅರಿವಿಗೆ ತಂದಿದ್ದರೂ ಯೋಜನೆ ಕಾರ್ಯಗತಗೊಂಡಿರಲಿಲ್ಲ.ಬಳಿಕ ಕಳೆದ ವರ್ಷ ಮಾಣಿಲ ಗ್ರಾಮಕ್ಕೆ ಆಗಮಿಸಿದ ಶಾಸಕ ಆಶೋಕ್ ರೈ ಅವರಲ್ಲೂ ಮನವಿ ಮಾಡಲಾಗಿತ್ತು. ಇದೀಗ ಸ್ಥಳೀಯ ಕೃಷಿಕರು ನಾಗರಿಕರೆಲ್ಲಾ ಒಗ್ಗೂಡಿ ಒಂದು ಸಮಿತಿ ರಚಿಸಿ ಬೇಡಿಕೆ ಇರಿಸಿದ್ದು ಕೇರಳ ಇರಿಗೇಶನ್ ಇಲಾಖೆ ಈ ಯೋಜನೆ ಬಗ್ಗೆ ಆಸಕ್ತಿ ವಹಿಸಿ ಪರಿಶೀಲನೆ ನಡೆಸಿ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

0 Comments