ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಭಾರಿ ಪ್ರಮಾಣದ ಮಾದಕ ದ್ರವ್ಯ ಜಾಲವನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಸಿದ್ಧಿಖಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ ಮತ್ತು ಹುಣಸೂರಿನ ಮೊಹಮ್ಮದ್ ಇರ್ಫಾನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಬಂಧಿತರಿಂದ ಅಂದಾಜು 12 ಕೋಟಿ ರೂಪಾಯಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಹಾಗೂ ತಯಾರಿಕಾ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದ ಒಂಟಿ ಮನೆಯೊಂದರಲ್ಲಿ ಈ ಮಾದಕ ದ್ರವ್ಯ ತಯಾರಿಕೆ ಮತ್ತು ಸಂಗ್ರಹಣೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾದಕ ವಸ್ತುಗಳ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಾಚರಣೆಯ ವೇಳೆ ಪೊಲೀಸರು 7.35 ಕೆ.ಜಿ ತೂಕದ ಮೆಫೆಡ್ರೋನ್ ಮತ್ತು 41 ಕೆ.ಜಿ ತೂಕದ ಡ್ರಗ್ ಪ್ರಿಕರ್ಸರ್ ಗಳನ್ನು ಜಪ್ತಿ ಮಾಡಿದ್ದಾರೆ. ತನಿಖೆಯ ವೇಳೆ ಹುಣಸೂರು ಟೌನ್‌ನ ರೆಹಮತ್ ಮೊಹಲ್ಲಾದಲ್ಲಿರುವ ಶೆಡ್ ಒಂದರಲ್ಲಿ ಡ್ರಗ್ಸ್ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿಗಳು ವ್ಯವಸ್ಥಿತವಾಗಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ ವಿತರಣೆ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಬೃಹತ್ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆಯೇ ಅಥವಾ ಅಂತಾರಾಜ್ಯ ಮಟ್ಟದ ಸಂಪರ್ಕವಿದೆಯೇ ಎಂಬ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಸ್ತುತ ಆರೋಪಿಗಳ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.
.jpeg)
0 Comments