ಕಾಸರಗೋಡು : ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಯು ಕಾಸರಗೋಡಿನ ಕನ್ನಡಿಗರ ಹಿತಕ್ಕೆ ಮಾರಕವಾದುದು. ಒಂದರಿಂದ ಹತ್ತನೇ ತರಗತಿಯ ತನಕ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ಪ್ರಸ್ತಾಪದಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶವನ್ನು ಹೊರತುಪಡಿಸಬೇಕು. ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಮಲಯಾಳ ಕಡ್ಡಾಯಗೊಳಿಸುವುದು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ಕಸಿಯುವುದಕ್ಕೆ ಸಮಾನವಾಗಿದೆ. ಗಡಿನಾಡು ಕಾಸರಗೋಡಿನ ಕನ್ನಡಿಗರ ಹಕ್ಕು ಸವಲತ್ತುಗಳನ್ನು ಕಸಿದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನರಾವ್ ಬೇಕಲ್ ಹೇಳಿದರು. ಮಲಯಾಳ ಭಾಷಾ ಮಸೂದೆಯ ವಿರುದ್ಧ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆದ ಕನ್ನಡಿಗರ ಪ್ರತಿಭಟನಾ ಸಭೆಯನ್ನು ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ.ಎ, ಅಧಿಕೃತ ವಕ್ತಾರ ಬಾಬು, ನೌಕರರ ಸಂಘದ ಮಾಜಿ ಅಧ್ಯಕ್ಷರು ಜಯ ನಾರಾಯಣ ತಾಯನ್ನೂರ್, ಕನ್ನಡ ಪತ್ರಕರ್ತರ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯಕಟ್ಟೆ, ಗಮಕ ಕಲಾಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕರೆ ಶಂಕರ ನಾರಾಯಣ ಭಟ್, ಧಾರ್ಮಿಕ ಮುಂದಾಳು ಡಾ. ಕೆ .ಎನ್ ವೆಂಕಟರಮಣ ಹೊಳ್ಳ, ನಿವೃತ್ತ ಮುಖ್ಯ ಶಿಕ್ಷಕ ಸತೀಶ್ ಮಾಸ್ಟರ್, ನುಳ್ಳಿಪ್ಪಾಡಿ ನೇತಾಜಿ ರೆಸಿಡೆನ್ಸ್ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಧೂಮಾವತಿ ದೈವಸ್ಥಾನದ ಮೊಕ್ತೇಸರ ಗೋಪಾಲ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ಶಂಕರ ಜೆ.ಪಿ ನಗರ, ನಗರಸಭಾ ಸದಸ್ಯರಾದ ಸುಧಾರಾಣಿ ಅಣಂಗೂರು, ಶೃತಿ ವಿಕಾಸ್, ದಿವ್ಯಾ ಸಂದೀಪ್, ಕಾಸರಗೋಡು ಜಿಲ್ಲಾ ಮರ್ಚೆಂಟ್ಸ್ ಮಹಿಳಾ ವಿಂಗ್ ಅಧ್ಯಕ್ಷೆ ಆಶಾ ರಾಧಾಕೃಷ್ಣ , ರಾಮರಾಜ ಕ್ಷತ್ರಿಯ ಜಿಲ್ಲಾ ಸಂಘದ ಅಧ್ಯಕ್ಷ ಪ್ರದೀಪ್ ಬೇಕಲ್, ರಾಜೇಶ್ ಕೋಟೆಕಣಿ, ಶಶಿಕಲಾ ಟೀಚರ್ ಕುಂಬ್ಳೆ ಮೊದಲಾದವರು ಮಲಯಾಳ ಭಾಷಾ ಮಸೂದೆಯ ಸಾಧಕ ಬಾಧಕಗಳ ಕುರಿತು ಮತ್ತು ಕನ್ನಡಿಗರು ಕೈಗೊಳ್ಳಬೇಕಾದ ಪ್ರತಿಭಟನಾ ಕ್ರಮಗಳ ಕುರಿತು ಮಾತನಾಡಿದರು. ಗುರುರಾಜ್, ಉಷಾ ಕಿರಣ್, ಮೋಕ್ಷ ಮೊದಲಾದವರು ಕನ್ನಡ ಗೀತೆಗಳ ಗಾಯನ ನಡೆಸಿದರು. ಕನ್ನಡ ಭವನದ ಕೋಶಾಧಿಕಾರಿ ಸಂಧ್ಯಾ ರಾಣಿ ಟೀಚರ್ ಸ್ವಾಗತಿಸಿ, ಕಾರ್ಯದರ್ಶಿ ವಸಂತ ಕೆರೆಮನೆ ವಂದಿಸಿದರು.

0 Comments