ಕಾಸರಗೋಡು : ಸಾಹಿತ್ಯ ಪ್ರಕಾರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಓದುಗರು ಅತೀ ಹೆಚ್ಚು ಇಷ್ಟಪಡುವ ಪ್ರಕಾರವೆಂದರೆ ಅದು ಚುಟುಕು ಅಥವಾ ಹನಿಗವನವಾಗಿದೆ. ಕಳೆದ ನಲುವತ್ತು ವರ್ಷಗಳಿಂದ ಚುಟುಕು ಸಾಹಿತ್ಯ ಪರಿಷತ್ತು ಚುಟುಕು ಕವಿಗಳನ್ನು ಬೆಳೆಸುವಲ್ಲಿ ಬಹಳಷ್ಟು ಶ್ರಮವಹಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಹೇಳಿದರು. ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಅವರ ನೇತೃತ್ವದಲ್ಲಿ ಕನ್ನಡ ಗ್ರಾಮದಲ್ಲಿ ನಡೆದ ಚುಟುಕು ಸಾಹಿತ್ಯೋತ್ಸವ ಮತ್ತು ಚುಟುಕು ಗೋಷ್ಠಿಯನ್ನು ಉದ್ಘಾಟಿಸಿ, ಒಡ್ಡಂಬೆಟ್ಟು ಅವರು 'ನಮ್ಮ ಜೀವನದಲ್ಲಿ ಚುಟುಕುಗಳಿಗೆ ಮಹತ್ವ ತುಂಬಾ ಇದೆ. ಏಕೆಂದರೆ, ಚುಟುಕುಗಳು ನಮ್ಮ ಚಿಂತನೆಗೆ ಹೊಸ ದಾರಿ ತೋರಿಸುತ್ತವೆ. ಕೆಲವೊಮ್ಮೆ ನಗಿಸುವುದರ ಮೂಲಕವೂ, ಕೆಲವೊಮ್ಮೆ ಗಂಭೀರವಾಗಿ ಆಲೋಚಿಸುವಂತೆ ಮಾಡುವುದರ ಮೂಲಕವೂ ಜೀವನ ಪಾಠಗಳನ್ನು ನೀಡುತ್ತವೆ' ಎಂದು ಅಭಿಪ್ರಾಯಪಟ್ಟರು.
ಡಾ. ವೆಂಕಟರಮಣ ಹೊಳ್ಳ ದೀಪ ಬೇಳಗಿಸಿ ಕಾರ್ಯಕ್ರಮಕ್ಕೆ ಚಾಲನೆಕೊಟ್ಟರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಉಳಿಯತ್ತಡ್ಕ ದಿಕ್ಸೂಚಿ ಭಾಷಣ ಮಾಡಿದರು. ಖ್ಯಾತ ವ್ಯಂಗ್ಯಚಿತ್ರಕಾರ ವೆಂಕಟ ಭಟ್ ಎಡನೀರು ಕವಿಗೋಷ್ಟಿಯ ಅದ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾಸರಗೋಡು ಗಡಿನಾಡು ಸಾಹಿತ್ಯ ಪರಿಷತ್ತು ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಕ್ಷ ಪುತ್ರಕಲ, ಸಂಕೀರ್ತನೆಕಾರ ಜಯನಾಂದ ಹೊಸದುರ್ಗ, ಧಾರವಾಡದ ಸಂಜೀವ ತುಮಕನಾಳ, ದಿವ್ಯಾ ಗಟ್ಟಿ, ಡಾ.ವಾಣೀಶ್ರೀ ಕಾಸರಗೋಡು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು. ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು.

0 Comments