Ticker

6/recent/ticker-posts

Ad Code

ನಾನು ಶಿವನ ಅವತಾರ ಎಂದು ಸ್ವಯಂ ಘೋಷಿತ ದೇವಮಾನವನಿಂದ ಮಹಿಳೆಯ ಅತ್ಯಾಚಾರ : ಕೇಸು ದಾಖಲು

 

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ತಾನು ಶಿವನ ಅವತಾರ ಎಂದು ಹೇಳಿಕೊಂಡು 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ  ಪ್ರಕರಣ ವರದಿಯಾಗಿದೆ.   ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯನ್ನು ಋಷಿಕೇಶ್ ವೈದ್ಯ (40) ಎಂದು ಗುರುತಿಸಲಾಗಿದೆ. 

ಇತ್ತೀಚೆಗೆ ನಾಸಿಕ್‌ನಲ್ಲಿ ಮರ್ಚೆಂಟ್ ನೇವಿ ಮಾಜಿ ಅಧಿಕಾರಿ ಮತ್ತು ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಬಂಧನವಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಮಹಿಳೆಯು, ಆರೋಪಿ ಋಷಿಕೇಶ್ ವೈದ್ಯ ವಿರುದ್ಧ ದೂರು ದಾಖಲಿಸಿದ್ದಾಳೆ.  ಪುಣೆ ನಿವಾಸಿಯಾಗಿರುವ ಮಹಿಳೆ 2023 ರಲ್ಲಿ ಫೇಸ್‌ಬುಕ್ ಮೂಲಕ ಆರೋಪಿಗೆ ಪರಿಚಯವಾಗಿದ್ದಳು. ಆ ವರ್ಷ ಡಿಸೆಂಬರ್‌ನಲ್ಲಿ, ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಪುಣೆಗೆ ಭೇಟಿ ನೀಡಿದ್ದ. ಬಳಿಕ ಪುಣೆಯ ಮಂಜರಿ ಪ್ರದೇಶದ ಲಾಡ್ಜ್‌ಗೆ ಕರೆದೊಯ್ದು, ಅಲ್ಲಿ ಅತ್ಯಾಚಾರವೆಸಗಿದ್ದ. ಇದಕ್ಕೂ ಮುನ್ನ ಮಂಪರು ಬರುವ ಔಷಧ ನೀಡಿದ್ದ. ದೌರ್ಜನ್ಯ ಎಸಗುವ ಛಾಯಾಚಿತ್ರಗಳನ್ನು ತೆಗೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಪಾಲ್ಘರ್ ಜಿಲ್ಲೆಯಲ್ಲಿ ಸಾಮಾಜಿಕ ಸಂಘಟನೆಯನ್ನು ನಡೆಸುತ್ತಿರುವ ಆರೋಪಿಯು ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ, ವಸೈನಲ್ಲಿರುವ ಹೋಟೆಲ್‌ಗೆ ಕರೆದು ಮತ್ತೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯು ಇದೇ ರೀತಿಯಲ್ಲಿ ಹಲವಾರು ಮಹಿಳೆಯರಿಗೆ ಆಮಿಷವೊಡ್ಡಿ ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ಅಪರಾಧ ಪುಣೆಯಲ್ಲಿ ನಡೆದಿದೆ ಎನ್ನಲಾದ ಕಾರಣ, ಮಾಣಿಕ್‌ಪುರ ಪೊಲೀಸರು ಬುಧವಾರ 'ಶೂನ್ಯ ಎಫ್‌ಐಆರ್' ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪುಣೆಯ ಹಡಪ್ಸರ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ ಎಂದು ಮಾಣಿಕ್‌ಪುರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಹೀರಾಲಾಲ್ ಜಾಧವ್ ಹೇಳಿದ್ದಾರೆ. ಶೂನ್ಯ ಎಫ್‌ಐಆರ್ ಎನ್ನುವುದು ಅಪರಾಧ ಎಲ್ಲಿ ಸಂಭವಿಸಿದೆ ಅಥವಾ ಯಾವ ಠಾಣೆಯ ನ್ಯಾಯವ್ಯಾಪ್ತಿಯನ್ನು ಹೊಂದಿದೆ ಎಂಬುದನ್ನು ಲೆಕ್ಕಿಸದೆ ಭಾರತದ ಯಾವುದೇ ಪೊಲೀಸ್ ಠಾಣೆಯಲ್ಲಿ ಸಲ್ಲಿಸಬಹುದಾದ ಪ್ರಥಮ ಮಾಹಿತಿ ವರದಿಯಾಗಿದೆ.

Post a Comment

0 Comments