Ticker

6/recent/ticker-posts

Ad Code

ಕಲಬುರಗಿ - ಮಂಗಳೂರು ಮಧ್ಯೆ ವಿಮಾನ ಸೇವೆಗೆ ಡಾ.ಸದಾನಂದ ಪೆರ್ಲ ಆಗ್ರಹ


 ಕಲಬುರಗಿ : ಕಲಬುರಗಿಯಿಂದ ಬೆಂಗಳೂರಿಗೆ ಜೂನ್ 10 ರಿಂದ ವಿಮಾನ ಸಂಚಾರ ಪುನರಾರಂಭಗೊಳ್ಳುವುದು ಹರ್ಷದ ಸಂಗತಿ ಹಾಗೂ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕವನ್ನು ಸಂಪರ್ಕ ಕಲ್ಪಿಸುವ ಕಲಬುರಗಿ -  ಮಂಗಳೂರು ಮಧ್ಯೆ ವಿಮಾನ ಸೇವೆ ಕೂಡಲೇ ಆರಂಭಿಸಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ  ಡಾ.ಸದಾನಂದ ಪೆರ್ಲ ಒತ್ತಾಯಿಸಿದ್ದಾರೆ.

      ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸಂಚಾರ ಪುನರಾರಂಭಗೊಂಡಿರುವುದರಿಂದ ರಾಜಧಾನಿಗೆ ಸಂಚರಿಸಲು ಕಲ್ಯಾಣ ಕರ್ನಾಟಕ ಭಾಗದ ಹಾಗೂ ಸುತ್ತು ಮುತ್ತಲು ಜಿಲ್ಲೆಗಳ ಜನತೆಗೆ ವರದಾನವಾಗಲಿದೆ. ಇದರಿಂದ ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳ ಪ್ರಗತಿಗೆ ಪೂರಕವಾಗಲಿದೆ. ಆದರೆ ಉತ್ತರ ಮತ್ತು ದಕ್ಷಿಣದ ಕರಾವಳಿ ಕರ್ನಾಟಕವನ್ನು ಜೋಡಣೆ ಮಾಡಲು ವಿಮಾನ ಸಂಪರ್ಕ ವ್ಯವಸ್ಥೆ ಅತ್ಯಂತ ಅಗತ್ಯವಾಗಿದ್ದು ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಅಕ್ಕಲಕೋಟ್ ಸೋಲಾಪುರ, ಲಾತೂರ್ ಮುಂತಾದಡೆಗಳಿಂದ ಶಿಕ್ಷಣ, ಪ್ರವಾಸೋದ್ಯಮ ಹಾಗೂ ದೇವಾಲಯಗಳ ಪ್ರವಾಸಿಗರ ಸಂಖ್ಯೆ ಅತ್ಯಧಿಕವಿದೆ . ಆದರೆ ಪ್ರಸ್ತುತ ಬಸ್ ಗಳಲ್ಲಿ ಕನಿಷ್ಠ 17 ಗಂಟೆಗಳ ಪ್ರವಾಸ ಮಾಡಿ ಕರಾವಳಿಯ ಉಡುಪಿ ಅಥವಾ ಮಂಗಳೂರನ್ನು ತಲುಪಬೇಕಾಗಿದೆ. ಖಾಸಗಿ ವಾಹನದಲ್ಲಿ ಕನಿಷ್ಠ 12 ಗಂಟೆಗಳ ಪ್ರಯಾಣ ಸಮಯ ತಗಲುತ್ತದೆ. ಆದುದರಿಂದ ಕಲಬುರಗಿ ಮತ್ತು ಬೀದರ್ ನಿಂದ ಮಂಗಳೂರಿಗೆ ಬೆಂಗಳೂರು ಮಾರ್ಗವಾಗಿ ( ಒನ್ ಸ್ಟಾಪ್) ಸಂಚರಿಸುವ ವಿಮಾನ ಸೇವೆ ಅತ್ಯಂತ ಅಗತ್ಯವಾಗಿದೆ ಎಂದು ಡಾ.ಪೆರ್ಲ ತಿಳಿಸಿದ್ದಾರೆ.

      ಪ್ರಸ್ತುತ ಬೀದರ್ ಕಲಬುರಗಿಯಿಂದ ಒಟ್ಟು ನಾಲ್ಕೈದು ಖಾಸಗಿ ಬಸ್ಸುಗಳು ವಿಜಯಪುರ  ಹುಬ್ಬಳ್ಳಿ, ಅಂಕೋಲಾ, ಉಡುಪಿ, ಭಟ್ಕಳ ದಾರಿಯಾಗಿ ಮಂಗಳೂರಿಗೆ ಸಂಚರಿಸುತ್ತಿದೆ. ಯಾದಗಿರಿ ಶಹಾಪುರದಿಂದಲೂ ಖಾಸಗಿ ಬಸ್ ಸಂಚಾರವಿದೆ. ಕರಾವಳಿ  ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಂಸದರು ಜಂಟಿಯಾಗಿ ಪ್ರಯತ್ನಿಸಿ ಈ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೇಂದ್ರ ಸರ್ಕಾರವು ಉಡಾನ್ ಯೋಜನೆಯಡಿಯಲ್ಲಿ ಕಲಬುರಗಿ ಸೇರ್ಪಡೆ ಮಾಡಿ ಸಾಮಾನ್ಯ ಜನರು ಕೂಡಾ ವಿಮಾನದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಡಾ. ಸದಾನಂದ ಪೆರ್ಲ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Post a Comment

0 Comments