ಕಾಸರಗೋಡು : ಅತ್ತೆ-ಮಾವನ ಮುಂದೆಯೇ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸಾವನ್ನಪ್ಪಿದ ಪ್ರಕರಣದ ತನಿಖಾ ವರದಿ ಬಿಡುಗಡೆಯಾಗಿದ್ದು ಸುಫೈದಾ ಅವರ ದೇಹದ ಮೇಲೆ ಚಿತ್ರಹಿಂಸೆಯ ಗುರುತುಗಳು ಪತ್ತೆಯಾಗಿವೆ ಎಂದು ಉಲ್ಲೇಖಿಸಲಾಗಿದೆ. ಕಾಸರಗೋಡಿನ ಪನಾಲತ್‌ನ ಚರ್ಲಡುಕ್ಕದ ನಿವಾಸಿ ಫಾತಿಮತ್ ಸುಫೈದಾ (24) ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡ ದಿನ ತಾವೇ ಅವರನ್ನು ಹೊಡೆದಿದ್ದಾಗಿ ಅವರ ಪತಿ ಆದಿಲ್ ಒಪ್ಪಿಕೊಂಡಿದ್ದಾರೆ. ಇದೀಗ ಆದಿಲ್ ಬಂಧನದಲ್ಲಿದ್ದಾರೆ. ಅತ್ತೆ-ಮಾವನ ಚಿತ್ರಹಿಂಸೆಯಿಂದಾಗಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಿಳೆಯ ಕುಟುಂಬ ಆರೋಪಿಸಿತ್ತು. ಪ್ರಥಮ ವಿವಾಹ ವಾರ್ಷಿಕೋತ್ಸವ ಆಚರಿಸಬೇಕಾದ ಸಂದರ್ಭದಲ್ಲಿಯೇ ಈ ದುರ್ಘಟನೆ ಘಟನೆ ನಡೆದಿದೆ. ಮದುವೆಯ ಸಮಯದಲ್ಲಿ ಕುಟುಂಬಸ್ಥರು ನೀಡಿದ್ದ ಚಿನ್ನದ ಆಭರಣಗಳು ಮತ್ತು ಹಾರಗಳನ್ನು ಪತಿ ಬೇಡಿಕೆ ಇಟ್ಟಿದ್ದಾಗಿ ಮತ್ತು ಇದಕ್ಕಾಗಿ ಸುಫೈದಾ ಅವರನ್ನು ನಿರಂತರವಾಗಿ ಥಳಿಸಿ ಮಾನಸಿಕವಾಗಿ ಹಿಂಸಿಸುತ್ತಿದ್ದ ಎಂದು ಕುಟುಂಬದವರು ಆರೋಪಿಸಿದ್ದಾರೆ. ಶನಿವಾರ, ಚಿನ್ನದ ವಿಚಾರದಲ್ಲಿ ಸುಫೈದಾ ಅವರ ಗಂಡನ ಮನೆಯಲ್ಲಿ ಜಗಳ ನಡೆದಿತ್ತು. ಈ ಮಧ್ಯೆ, ಪತಿ ಸುಫೈದಾ ಅವರನ್ನು ಹೊಡೆದು, ಆಕೆಯ ಫೋನ್ ಎಸೆದು, ಆಕೆ ಈ ಮಾಹಿತಿಯನ್ನು ಬಹಿರಂಗಪಡಿಸದಂತೆ ತಡೆಯಲು ಅದನ್ನು ಮುರಿದರು. ಇದರ ನಂತರ, ಸುಫೈದಾ ತನ್ನ ಅತ್ತೆ-ಮಾವನ ಮುಂದೆಯೇ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಅತ್ತೆ-ಮಾವಂದಿರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಕೂಡಾ ಪ್ರಯತ್ನಿಸಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ. ವಿದ್ಯಾನಗರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

0 Comments