ಮಡಿಕೇರಿ : ಆನೆ ಸಾಕಣಿಕೆಗೆ ಪ್ರಸಿದ್ಧ ಕೇಂದ್ರವಾದ ದುಬಾರೆಗೆ ವೀಕ್ಷಣೆಗೆಂದು ಕುಟುಂಬ ಸಮೇತ ತೆರಳಿದ ಮಹಿಳೆಯೊಬ್ಬರು ಸಾಕಾನೆಗಳ ಕಾದಾಟದಲ್ಲಿ ಸಾವಿಗೀಡಾದ ದುರ್ಘಟನೆ ದುಬಾರೆ ಶಿಬಿರದಲ್ಲಿ ನಡೆದಿದೆ. ಚೆನೈ ಮೂಲದ ಜಿನ್ಮು (33) ಸಾವಿಗೀಡಾದ ದುರ್ದೈವಿ ಮಹಿಳೆ. ಮೇ 18ರ ಬೆಳಿಗ್ಗೆ ಮಹಿಳೆ ಹಾಗೂ ಅವರ ಪತಿ ಜೋಯಲ್ ಜತೆ ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸಿದ್ದರು. ಕೆಲ ಸಮಯ ಸಾಕಾನೆಗಳೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದರು. ಬಳಿಕ ಸಾಕಾನೆಗಳಿಗೆ ಸ್ನಾನ ಮಾಡಿಸಿ ನೀರು ಕುಡಿಸಲು ಮಾವುತರು ಹಾಗೂ ಕಾವಾಡಿಗಳು ತೆರಳಿದ ಸಂದರ್ಭದಲ್ಲಿ, ಕೆಲ ಪ್ರವಾಸಿಗರು ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದಾರೆ. ದಂಪತಿ ಸಹ ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದರು. ಈ ವೇಳೆ ಮಾರ್ತಾಂಡ ಹಾಗೂ ಕಂಜನ್ ಆನೆಗಳ ನಡುವೆ ನದಿಯಲ್ಲೇ ಕಾದಾಟ ಶುರುವಾಗಿದೆ. ನೋಡು ನೋಡುತ್ತಿದ್ದಂತೆ ಸಾಕಾನೆಗಳ ಕಾದಾಟ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಾರ್ತಾಂಡ ಮಹಿಳೆಯ ಮೇಲೆ ಬಿದ್ದಿದೆ. ಆನೆ ಬಿದ್ದ ಪರಿಣಾಮ, ಜಿನ್ಮು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿ ಜೋಯಲ್‌ಗೆ ಗಂಭೀರ ಗಾಯಗಳಾಗಿವೆ. ಉಳಿದ ಪ್ರವಾಸಿಗರು ಜೋಯಲ್ ಅವರನ್ನು ಕುಶಾಲನಗರ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದಾರೆ. ಆನೆಗಳ ಕಾದಾಟದಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸಿದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ.ಕಂಜನ್ ಆನೆ ಮೈಸೂರು ದಸರಾದಲ್ಲೂ ಇದೇ ರೀತಿಯಲ್ಲಿ ಗಲಾಟೆ ಮಾಡಿಕೊಂಡು ಅರಮನೆಯಿಂದ ಹೊರಗೆ ಓಡಿ ಬಂದಿತ್ತು. ಇದರಿಂದ ಜನ ಅತಂಕಕ್ಕೆ ಒಳಗಾಗಿದ್ದರು. ಇದೀಗ ಮತ್ತೊಮ್ಮೆ ಆನೆಗಳ ಸಾಕಣೆ ಕೇಂದ್ರದಲ್ಲೂ ಆತಂಕ ಸೃಷ್ಠಿಸಿದೆ.

0 Comments