ಬದಿಯಡ್ಕ: ಬದಿಯಡ್ಕದ ಪ್ರಸಿದ್ಧ ವೈದ್ಯ ಡಾ| ಶ್ರೀನಿಧಿ ಸರಳಾಯ ಅವರು ಕಳೆದ ಅನೇಕ ವರ್ಷಗಳಿಂದ ಆಟಿ ಅಮಾವಾಸ್ಯೆಯ ಪುಣ್ಯದಿನದಂದು ನಾಡಿನ ಜನರಿಗೆ ಆಟಿಕಷಾಯವನ್ನು ಉಚಿತವಾಗಿ ವಿತರಿಸುತ್ತಿದ್ದು, ಗುರುವಾರ ಬೆಳಗ್ಗೆ ಬದಿಯಡ್ಕ ಶ್ರೀನಿಧಿ ಕ್ಲಿನಿಕ್ನಲ್ಲಿ ವಿತರಿಸಲಾಯಿತು. ನಾಡಿನ ವಿವಿಧೆಡೆಗಳಿಂದ ಅನೇಕರು ಬೆಳ್ಳಂಬೆಳಗ್ಗೇ ಖಾಲಿ ಹೊಟ್ಟೆಯಲ್ಲಿ ಆಗಮಿಸಿ ಕಷಾಯವನ್ನು ಸೇವಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅವರು ಮಾತನಾಡಿ ನಾಡಿನ ಜನರ ಆರೋಗ್ಯದ ಬಗ್ಗೆ ಕಾಳಜಿಯಿರುವ ವೈದ್ಯರು ಆಟಿಕಷಾಯ ನೀಡುತ್ತಿರುವುದು ನಮ್ಮ ನಾಡಿಗೇ ಹೆಮ್ಮೆಯ ವಿಚಾರವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಕಷಾಯದ ಸೇವನೆಯು ನಮ್ಮ ಆರೋಗ್ಯಕ್ಕೆ ಉತ್ತಮ ಎಂಬುದನ್ನು ಅರಿತು ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ ಎಂದರು.
ಡಾ| ಶ್ರೀನಿಧಿ ಸರಳಾಯ ಅವರು ಮಾತನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು. ಇದೇ ಸಂದರ್ಭದಲ್ಲಿ ಪ್ರತೀವರ್ಷ ಆಟಿಕಷಾಯ ವಿತರಣೆಗೆ ಸಹಕರಿಸುತ್ತಿರುವ ವಿಶ್ವನಾಥ ಬಾರಡ್ಕ ಅವರ ಪರವಾಗಿ ಪುತ್ರ ಶ್ರೀಶಾನ್ ಬಾರಡ್ಕ ಅವರನ್ನು ಶಾಲುಹೊದೆಸಿ ಗೌರವಿಸಲಾಯಿತು. ಧೀಕ್ಷಿತ್ ಬದಿಯಡ್ಕ, ಡಾ| ವಿಕ್ರಂ ಕೌಶಿಕ್, ಶಿವಪ್ರಸಾದ್ ಬೆದ್ರಡಿ ಸಹಕರಿಸಿದರು. ಡಾ. ಬೇ.ಸೀ. ಗೋಪಾಲಕೃಷ್ಣ ಭಟ್, ರಾಘವೇಂದ್ರ ಅಮ್ಮಣ್ಣಾಯ ಹಾಗೂ ನೂರಾರು ಮಂದಿ ಕಷಾಯವನ್ನು ಸೇವಿಸಿದರು. 700ಕ್ಕೂ ಹೆಚ್ಚುಮಂದಿ ಕಷಾಯವನ್ನು ಸೇವಿಸಿದ್ದರು. ಬೆಳಗಿನ ಜಾವವೇ ಚಿಕಿತ್ಸಾಲಯದ ಮುಂದೆ ಕಷಾಯ ಸೇವನೆ ಜನರು ಆಗಮಿಸಿದ್ದರು.
2012ನೇ ಇಸವಿಯಿಂದ ಪ್ರತೀವರ್ಷ ಆಟಿ ಅಮಾವಾಸ್ಯೆಯ ದಿನದಂದು ಬದಿಯಡ್ಕದಲ್ಲಿ ನಮ್ಮ ಚಿಕಿತ್ಸಾಲಯದಲ್ಲಿ ಆಟಿಕಷಾಯವನ್ನು ಉಚಿತವಾಗಿ ವಿತರಿಸುತ್ತಿದ್ದೇವೆ. ಈದಿನ ಸುಮಾರು 700ಕ್ಕೂ ಹೆಚ್ಚುಮಂದಿ ಬೆಳಗಿನ ಜಾವವೇ ಬಂದು ಔಷಧಿಯ ರೂಪದಲ್ಲಿ ಪಡೆದುಕೊಂಡಿದ್ದಾರೆ.
- ಡಾ| ಶ್ರೀನಿಧಿ ಸರಳಾಯ, ಬದಿಯಡ್ಕ
0 Comments