Ticker

6/recent/ticker-posts

ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಹಾಗೂ ಅಭಿಮಾನಿಗಳ ಸಮಾಲೋಚನಾ ಸಭೆ


 ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಹಾಗೂ ಅಭಿಮಾನಿಗಳ ಸಮಾಲೋಚನಾ ಸಭೆ ನಡೆಯಿತು. ಭಕ್ತರು ಹಾಗೂ ಗಣ್ಯರ ಸಲಹೆ–ಸೂಚನೆಗಳನ್ನು ಪಡೆದು, ಚರ್ಚಿಸಿ, ಶ್ರೀ ಕ್ಷೇತ್ರಕ್ಕೂ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೂ ಮಾನಹಾನಿಕರವಾಗಿ ವರ್ತಿಸುವವರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.ಧರ್ಮ, ದಾನ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿರುವ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯ ಹಾಗೂ ಮಹತ್ತ್ವವನ್ನು ಕಾಪಾಡಿ, ಅದಕ್ಕೆ ಶಕ್ತಿಶಾಲಿ ಬೆಂಬಲ ನೀಡುವ ಉದ್ದೇಶದಿಂದ ಇಂದು ಮಧ್ಯಾಹ್ನ 3.00 ಗಂಟೆಗೆ ಸಿರಿಬಾಗಿಲಿನ ಪ್ರತಿಷ್ಠಾನ ಸಾಂಸ್ಕೃತಿಕ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ದೇವಸ್ಥಾನ–ಮಠಗಳ ಪ್ರಮುಖರು, ಪ್ರಮುಖ ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಮತ್ತು ನೂರಾರು ಭಕ್ತರು ಪಾಲ್ಗೊಂಡರು.


ಸಿರಿಬಾಗಿಲು ಪ್ರತಿಷ್ಠಾನದ ಅದ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು  ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯು ಆರಂಭದಲ್ಲಿ ಜಗದೀಶ ಕೂಡ್ಲು ಅವರು ಸ್ವಾಗತ ಭಾಷಣ ಮಾಡಿದರು. ನಂತರ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೊಡಿ ಅವರು ಪ್ರಸ್ತಾವಿಕ ಭಾಷಣ ನೀಡಿದರು. ಮುಖ್ಯ ಉಪನ್ಯಾಸ ನೀಡಿದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಧರ್ಮಸ್ಥಳದ ಸಮೃದ್ಧ ಇತಿಹಾಸ, ಕ್ಷೇತ್ರದ ಧರ್ಮದಾನ ಪರಂಪರೆ ಹಾಗೂ ಶ್ರೀ ಮಂಜುನಾಥಸ್ವಾಮಿಯ ಮಹಿಮೆಯನ್ನು ಉಲ್ಲೇಖಿಸಿ, “ಧರ್ಮಸ್ಥಳವು ನಮ್ಮ ನಂಬಿಕೆಯ ಪ್ರಕಾಶಕೇಂದ್ರ; ಅದರ ಪಾವಿತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಪವಿತ್ರ ಕರ್ತವ್ಯ” ಎಂದು ಹೃದಯಮುಟ್ಟುವ ಸಂದೇಶ ನೀಡಿದರು.


ಅನಂತರ ಮಾತನಾಡಿದ ಎಸ್.ಪಿ. ಶಾಜಿ (ಜಿಲ್ಲಾ ಅಧ್ಯಕ್ಷರು, ಹಿಂದು ಐಕ್ಯ ವೇದಿ) ಅವರು, “ಭಕ್ತರ ಹೃದಯಗಳಲ್ಲಿ ಹೊತ್ತಿರುವ ನಂಬಿಕೆಯ ಜ್ವಾಲೆ ಎಂದಿಗೂ ನಂದುವುದಿಲ್ಲ. ಧರ್ಮಸ್ಥಳ ನಮ್ಮ ಆತ್ಮೀಯ ದೀಪಸ್ತಂಭ, ಅದನ್ನು ಕಾಪಾಡಲು ಸಮಾಜವೇ ಒಗ್ಗೂಡಬೇಕು” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.

ಗಣೇಶ್ ಮಾವಿನಕಟ್ಟೆ (ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಶ್ವಹಿಂದೂ ಪರಿಷತ್), ಅಖಿಲೇಶ್ ನಗುಮುಗಂ, ರಾಘವೇಂದ್ರ ಬದಿಯಡ್ಕ ಹಾಗೂ ಕಿರಣ್ ಪ್ರಸಾದ್ ಕೂಡ್ಲು ಅವರು ಧರ್ಮಸ್ಥಳದ ಮಹತ್ವ ಮತ್ತು ಅದರ ಸಾಮಾಜಿಕ–ಆರ್ಥಿಕ ಕೊಡುಗೆಗಳನ್ನು ಉಲ್ಲೇಖಿಸಿ ಭಕ್ತರಲ್ಲಿ ಹೊಸ ಚೈತನ್ಯ ತುಂಬಿದರು. ಸಭೆಯ ಕೊನೆಯಲ್ಲಿ ಶ್ರೀ ರಾಜನ್ ಮುಳಿಯಾರ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹಿಂದೂ ಐಕ್ಯ ವೇದಿ) ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಸಭೆಯಲ್ಲಿ 25 ಸದಸ್ಯರ ಅಡ್‌ಹಾಕ್ (ತಾತ್ಕಾಲಿಕ) ಸಮಿತಿಯನ್ನು ರಚಿಸಲಾಗಿದ್ದು, ಶ್ರೀ ರಾಜನ್ ಮುಳಿಯಾರ್ ಅವರನ್ನು ಸಂಯೋಜಕರಾಗಿ ಹಾಗೂ ಗಣೇಶ್ ಮಾವಿನಕಟ್ಟೆ ಅವರನ್ನು ಸಹ–ಸಂಯೋಜಕರಾಗಿ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಮಹತ್ತರ ಪ್ರತಿಭಟನೆಗಳಿಗೆ ನೇತೃತ್ವ ನೀಡಲು 1001 ಸದಸ್ಯರ ಪ್ರತಿಭಟನಾ ಸಮಿತಿಯನ್ನು ಶೀಘ್ರದಲ್ಲೇ ರಚಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾಸರಗೋಡು ನಗರದಿಂದ ಉಳಿಯತ್ತಡ್ಕವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಕೂಡ ನಡೆಸುವುದಾಗಿ ತೀರ್ಮಾನಿಸಲಾಯಿತು.


ಇದೇ ರೀತಿ, ಸೆಪ್ಟೆಂಬರ್ 8, 2025ರಂದು ಎಡನೀರು ಮಠಧೀಶರಾದ ಜಗದ್ಗುರು ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿಗಳ ಮುಂದಾಲುತ್ವದಲ್ಲಿ ಮಠದಿಂದ ಧರ್ಮಸ್ಥಳದವರೆಗೆ ಹಮ್ಮಿಕೊಳ್ಳುವ ಬೃಹತ್ ವಾಹನ ಜಾಥಾ "ಚಲೋ ಧರ್ಮಸ್ಥಳ" ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಲು ಸಭೆಯಲ್ಲಿ ಘೋಷಿಸಲಾಯಿತು.

Post a Comment

0 Comments