ಮಂಜೇಶ್ವರ: ಬಂಟರ ಸಂಘ ಮಂಜೇಶ್ವರದ ಆಶ್ರಯದಲ್ಲಿ ದ್ವಿತೀಯ ವರ್ಷದ "ಆಟಿದಕೂಟ "ಎಂಬ ಆಷಾಡ ಮಾಸದ ವಿಶಿಷ್ಟ ಕಾರ್ಯಕ್ರಮವನ್ನು ಆಚರಿಸಲಾಯಿತು. ಇದರೊಂದಿಗೆ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಸಹಾಯಧನ ವಿತರಣಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ಉದ್ಯಾವರ ಮಾಡದ ಶ್ರೀ ಅರಸುಮಂಜಿಷ್ಣಾರ್ ದೈವಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಸಾನಿಧ್ಯದ ಪರಿಸರದಲ್ಲಿರುವ ತೀಯಾ ಸಮಾಜ ಭವನ ಉದ್ಯಾವರ ಮಾಡ ಎಂಬಲ್ಲಿ ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಶ್ರೀ ಕ್ಷೇತ್ರ ಮಾಡದ ಅರ್ಚಕರಾದ ಶ್ರೀ ಬೀರು ಚೌಟರು ಉದ್ಘಾಟನೆಯನ್ನು ನೆರವೇರಿಸಿದರು. ಶ್ರೀ ರಾಮಕೃಷ್ಣ ಶೆಟ್ಟಿ ಕುಂಜತ್ತೂರು, ಶ್ರೀ ಡಾ. ಜಯಪಾಲಶೆಟ್ಟಿ ತಲಪಾಡಿ ದೊಡ್ಡಮನೆ, ಶ್ರೀ ಕಿರಣ್ ಶೆಟ್ಟಿ ಮಾಡ, ಶ್ರೀ ರವೀಂದ್ರ ಶೆಟ್ಟಿ ಚಕ್ರತೀರ್ಥ, ಶ್ರೀ ಮೋಹನ್ ಶೆಟ್ಟಿ ತೂಮಿನಾಡು, ಶ್ರೀ ಹರೀಶ್ ಶೆಟ್ಟಿ ಮಾಡ, ಹಾಗೂ ಹಲವಾರು ಹಿರಿಯ ಮತ್ತು ಕಿರಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಂಟರ ಸಂಘ ಮಂಜೇಶ್ವರದ ಪ್ರಸ್ತುತ ಅಧ್ಯಕ್ಷರಾದ ಶ್ರೀ ವಿಶ್ವನಾಥ ಶೆಟ್ಟಿ ಮಡಿವಾಳಪಾಲ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಲ್ಲಿ, ನೆರೆದ ಬಂಟ ಬಾಂಧವರನ್ನು ಸಂಘದ ಸದಸ್ಯರಾದ ಶ್ರೀ ಪ್ರಭಾಕರ ಶೆಟ್ಟಿ ಮಾಡ ಸ್ವಾಗತಿಸಿದರು. ಆಟಿ ತಿಂಗಳಲ್ಲಿ ಬಂಟರ ಜೀವನಶೈಲಿ, ಅಡುಗೆ ಪದ್ಧತಿಗಳ ವಿಶೇಷ ಮಾಹಿತಿಗಳನ್ನು ಹಂಚಿಕೊಂಡ ಈ ಕಾರ್ಯಕ್ರಮವನ್ನು ಶ್ರೀ ದಾಮೋದರ ಶೆಟ್ಟಿ ಸನ್ನಡ್ಕ ಇವರು ನಿರೂಪಿಸಿದರು. ಸಂಘದ ವಾರ್ಷಿಕ ಮಹಾಸಭೆಯಲ್ಲಿ, ಸಂಘವು ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಹಾಗೂ ಯೋಜನೆಗಳ ವರದಿಯನ್ನು ಕಾರ್ಯದರ್ಶಿ ಶ್ರೀ ಕಿರಣ್ ಬಿ ಶೆಟ್ಟಿ ಮಜಲ್ ಕುಂಜತ್ತೂರು ಮಂಡಿಸಿದರು. ಶ್ರೀ ರಘು ಆಳ್ವ ಮಾಡ ಮತ್ತು ಶ್ರೀ ಪ್ರಭಾಕರ್ ಶೆಟ್ಟಿ ಮಾಡ ಇವರು ಸಂಘದ ಆದಾಯ ಹಾಗೂ ಖರ್ಚು ವೆಚ್ಚಗಳ ವರದಿ ಮಂಡಿಸಿದರು. ಹಲವಾರು ಸ್ಪರ್ಧೆ, ಮನೋರಂಜನಾತ್ಮಕ ಚಟುವಟಿಕೆಗಳೊಂದಿಗೆ ಮಧ್ಯಾಹ್ನದ ವಿಶೇಷ ಭೋಜನ ಎಲ್ಲರ ಗಮನ ಸೆಳೆಯಿತು. ಆಟಿ ತಿಂಗಳಲ್ಲಿ ಬಂಟ ಸಮುದಾಯದ ಜನರು ತಯಾರಿಸುತ್ತಿದ್ದ ವಿವಿಧ ಬಗೆಯ ತಿಂಡಿ-ತಿನಸುಗಳನ್ನು ಸಂಘದ ಸದಸ್ಯರೇ ಮನೆಯಲ್ಲಿ ತಯಾರಿಸಿ ತಂದು ತಮ್ಮ ಕೈಯಾರೆ ಬಡಿಸಿದ್ದು, ಸೇರಿದ ಎಲ್ಲಾ ಬಂಟ ಬಾಂಧವರ ಮೆಚ್ಚುಗೆಗೆ ಪಾತ್ರವಾಯಿತು. ಭೋಜನದ ನಂತರ ಸದಸ್ಯರೆಲ್ಲ ಕೂಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ತುಳು ಜನಪದ ಶೈಲಿಯ ವೇಷಭೂಷಣಗಳೊಂದಿಗೆ - ಹಾಡು, ಪಾರ್ದನ, ನೃತ್ಯ ಪ್ರದರ್ಶನಗಳು ನೆರೆದ
ಪ್ರೇಕ್ಷಕರಿಗೆ ಬಂಟರ ಪರಂಪರೆ, ಆಚಾರ-ವಿಚಾರ, ಸಂಸ್ಕೃತಿಯ ಶ್ರೀಮಂತಿಕೆಯನ್ನು ನೆನಪಿಸಿದ್ದಲ್ಲದೆ, ಕೆಲ ಯುವಕರು ನಟಿಸಿದ ಹಾಸ್ಯ ಪ್ರಹಸನಗಳು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟಿತು. ಒಟ್ಟಾರೆ, ಅತ್ಯಂತ ಅಚ್ಚುಕಟ್ಟಾಗಿ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಜೇಶ್ವರ ಬಂಟರ ಪ್ರತಿಭೆಯನ್ನು ಎತ್ತಿ ಹಿಡಿಯಿತಲ್ಲದೆ ಅತಿಥಿ ಅಭ್ಯಾಗತರುಗಳಿಂದಲೂ ಭಾರೀ ಹೆಗ್ಗಳಿಕೆಗೆ ಪಾತ್ರವಾಯಿತು.
ಕಾಸರಗೋಡು ಜಿಲ್ಲಾ ಬಂಟರ ಭವನದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ಆಗಮಿಸಿ, ಮಂಜೇಶ್ವರ ಬಂಟರ ಸಂಘದ ಅಧಿಕೃತ ನಿವೇಶನಕ್ಕೆ ಭೇಟಿ ನೀಡಿದರು. ನಿರ್ಮಾಣ ಹಂತದಲ್ಲಿರುವ ಸಂಘದ ನೂತನ ಸಭಾಂಗಣದ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಿದ ಅವರು ಮಂಜೇಶ್ವರ ಬಂಟರ ಸಂಘದ ಯೋಜನೆಗಳಿಗೆ ಶುಭಹಾರೈಸಿದರು. ಇನ್ನು ಸಾಯಂಕಾಲದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಭಾಗದ ಬಂಟರ ಸಾಧನೆಗಳನ್ನು ಪ್ರಸ್ತಾಪಿಸುತ್ತಾ ಬಂಟ ಸಮುದಾಯದ ಏಳಿಗೆಗಾಗಿ ಪ್ರತಿಯೊಬ್ಬ ಬಂಟರ ಕರ್ತವ್ಯಗಳನ್ನು ನೆನಪಿಸಿದರು. ಈ ಸಂದರ್ಭದಲ್ಲಿ ಮಂಜೇಶ್ವರ ಬಂಟರ ಸಂಘದ ಸದಸ್ಯರು ಶ್ರೀಯುತರನ್ನು ಅವರು ಬಂಟ ಸಮುದಾಯಕ್ಕೆ ನೀಡುತ್ತಿರುವ ಕೊಡುಗೆಗಳ ಬಗೆಗೆ ಪ್ರಸ್ತಾಪಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸುಬ್ಬಯ್ಯ ರೈ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸುವುದರೊಂದಿಗೆ,ಆಗಸ್ಟ್ 10ನೇ ತಾರೀಕಿನಂದು ಮಂಗಲ್ಪಾಡಿ ಮನೆಯಲ್ಲಿ ನಡೆಯಲಿರುವ 'ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ 2025 ಮತ್ತು ಆಟಿದ ಕೂಟ' ಎಂಬ ಕಾರ್ಯಕ್ರಮಕ್ಕೆ ಆಮಂತ್ರಿಸಿದರು. ಸಭಾಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಂಘ ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಕುಮಾರ್ ರೈ , ಮಹಿಳಾ ವಿಭಾಗದ ಸದಸ್ಯೆ ಅನ್ನಪೂರ್ಣ ರೈ, ಗಡಿಪ್ರಧಾನರಾದ ಮಂಜಪ್ಪ ರೈ ತಾಳೆವು, ಬಂಟರ ಸಂಘ ಮಂಜೇಶ್ವರದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಮಡಿವಾಳ್ಪಾಲ್, ಯುವ ವಿಭಾಗ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೊಸಮನೆ, ಮಾತೃ ಸಮಿತಿಯ ಅಧ್ಯಕ್ಷೆವಶೋಭಾ ವಿ ಶೆಟ್ಟಿ ಚಕ್ರತೀರ್ಥ ಮುಂತಾದವರು ಉಪಸ್ಥಿತರಿದ್ದರು. 2024-25ರ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಅಥವಾ ಸರಕಾರಿ ಅನುದಾನಿತ ಶಾಲೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಕಲಿತು ಉತ್ತೀರ್ಣರಾದ ಒಟ್ಟು 17 ಮಕ್ಕಳಿಗೆ ವಿದ್ಯಾರ್ಥಿ ಸಹಾಯಧನವನ್ನು ವಿತರಿಸಲಾಯಿತು. ಶೇಕಡಾ 90 ಮತ್ತು ಅದಕ್ಕಿಂತ ಮೇಲ್ಪಟ್ಟು ಅಂಕಗಳೊಂದಿಗೆ ತೇರ್ಗಡೆಗೊಂಡ 10ನೇ ತರಗತಿಯ ಎರಡು ವಿದ್ಯಾರ್ಥಿಗಳನ್ನು ಹಾಗೂ ದ್ವಿತೀಯ ಪಿಯುಸಿಯ ಎರಡು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ಅದೇ ರೀತಿ, ಮುಕ್ತವಿಭಾಗದಲ್ಲಿ ಕಲೆ, ಈಜು, ಕರಾಟೆ ಹಾಗೂ ತಾಲೀಮು ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಮಂಜೇಶ್ವರ ಬಂಟರ ಸಂಘದ ನಾಲ್ಕು ಸಾಧಕರಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು. ಊರು, ಪರ-ಊರುಗಳಲ್ಲಿ ನಡೆದ ಕ್ರೀಡೋತ್ಸವಗಳಲ್ಲಿ ಭಾಗವಹಿಸಿ ವಿಜೇತರಾದ ಸಂಘದ ಕ್ರೀಡಾಳುಗಳನ್ನು ಅಭಿನಂದಿಸಲಾಯಿತು. ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಶ್ರೀ ದಾಮೋದರಶೆಟ್ಟಿ ಸನ್ನಡ್ಕ ಇವರು ನಿರೂಪಿಸಿದರು. ಶ್ರೀ ಮೋಹನ್ ಮಾಡ ವಂದಿಸಿದರು.
0 Comments