ಮಂಗಳೂರು : ಸ್ಕೂಟರ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇರಳದ ವೆಲ್ಲಾಡ್ ಒಟ್ಟತ್ತಾಯಿ ನಿವಾಸಿ ಅಲೆಕ್ಸ್ ಡೊಮಿನಿಕ್(25) ಮತ್ತು ಕಲ್ಲಿಕೋಟೆಯ ಕುರಚೂರು ನಿವಾಸಿ ಅಮಲ್ ಕೃಷ್ಣ (25) ಎಂದು ಗುರುತಿಸಲಾಗಿದೆ. ನವೆಂಬರ್ 14 ರಂದು ಮಂಗಳೂರಿಗೆ ಬಂದಿದ್ದ ಇವರು ಮಂಗಳೂರು ರೈಲ್ವೇ ಜಂಕ್ಷನ್ ಪ್ರದೇಶದಲ್ಲಿ ಸುತ್ತಾಡಿದ ಬಳಿಕ ನಾಗುರಿಯ ಬಸ್ ತಂಗುದಾಣ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್ ಹಾಗೂ ಜೆಪ್ಪಿನಮೊಗರು ಆದಿಮಾಯೆ ದೇವಸ್ಥಾನ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ನವೆಂಬರ್ 30ರಂದು ಮಂಗಳೂರಿಗೆ ಬರುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದ ಪೊಲೀಸರು ಆರೋಪಿಗಳಾದ ಅಲೆಕ್ಸ್ ಡೊಮಿನಿಕ್ ಹಾಗೂ ಅಮಲ್ ಕೃಷ್ಣರನ್ನು ಬಂಧಿಸಿ ಎರಡು ಸ್ಕೂಟರ್ ಹಾಗೂ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಅಲೆಕ್ಸ್‌ನ ವಿರುದ್ಧ ಹಿಂದೆ ಕೇರಳದ ಅಲಕ್ಕೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಾಗಾಟ ಮಾಡಿರುವ ಪ್ರಕರಣ ಹಾಗೂ ಅಮಲ್ ಕೃಷ್ಣ ನ ವಿರುದ್ಧ ತಲಶೇರಿ ಹಾಗೂ ಕುರಚೂಂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ಕಳವು ಮಾಡಿದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

0 Comments