ಒಂದು ದೇಶವನ್ನು ಶತ್ರುಗಳಿಂದ ರಕ್ಷಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವುದು ಆ ದೇಶದ ಸೈನ್ಯ. ಗಡಿ ಪ್ರದೇಶಗಳಲ್ಲಿ ಹಗಲಿರುಳೆನ್ನದೆ ಮಳೆ-ಚಳಿಯೆನ್ನದೆ ನಿದ್ರಾಹಾರ ತೊರೆದು ಶತ್ರುಗಳು ನುಸುಳದಂತೆ ಕಾವಲು ಕಾಯುವ ಯೋಧರು ನಮ್ಮೆಲ್ಲರ ಹೆಮ್ಮೆ. ಸೈನ್ಯ ಎಂಬುದು ಕೇವಲ ಒಂದು ಮಿಲಿಟರಿ ಸಂಸ್ಥೆಯಲ್ಲ, ಬದಲಿಗೆ ಶೌರ್ಯ, ತ್ಯಾಗ, ಶಿಸ್ತು ಮತ್ತು ದೇಶಭಕ್ತಿಯ ಸಂಕೇತವಾಗಿದೆ. ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಏಕತೆಯನ್ನು ಕಾಪಾಡುವುದು ಈ ಸಂಸ್ಥೆಯ ಮುಖ್ಯ ಗುರಿ. ಪ್ರವಾಹ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ, ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯುವ ನಮ್ಮ ವೀರ ಪಡೆಯು ತಮ್ಮ ಜೀವ-ಜೀವನವನ್ನು ಪಣಕ್ಕಿಟ್ಟು ನಮ್ಮೆಲ್ಲರಿಗೂ ಬದುಕನ್ನು ಕಟ್ಟಿಕೊಡುತ್ತದೆ.
ಭಾರತೀಯ ಸೇನೆಯಲ್ಲಿ ಮೂರು ವಿಭಾಗಗಳಿವೆ. ಭೂಸೇನೆ, ವಾಯುಪಡೆ, ಮತ್ತು ನೌಕಾ ಪಡೆ. ಭಾರತೀಯ ನೌಕಾಪಡೆಯು ಭಾರತೀಯ ರಕ್ಷಣಾ ಪಡೆಗಳ ಒಂದು ಅಂಗವಾಗಿದ್ದು, ದೇಶದ ಕಡಲ ಗಡಿಗಳನ್ನು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ನೌಕಾ ಸಿಬ್ಬಂದಿ ಮುಖ್ಯಸ್ಥ (CNS) ಅಡ್ಮಿರಲ್ ಅವರ ನೇತೃತ್ವದಲ್ಲಿದ್ದು, ನವದೆಹಲಿಯಲ್ಲಿ ಇದರ ಪ್ರಧಾನ ಕಛೇರಿಯಿದೆ. ಇದು ಪಶ್ಚಿಮ, ಪೂರ್ವ ಮತ್ತು ದಕ್ಷಿಣ ನೌಕಾ ಕಮಾಂಡ್ ಎಂದು ಮೂರು ಕಮಾಂಡ್‌ಗಳನ್ನು ಹೊಂದಿದೆ.
1612 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತೀಯ ನೌಕಾಪಡೆಯ ಅಡಿಪಾಯವನ್ನು ಹಾಕಿತು. ಆ ಸಮಯದಲ್ಲಿ ಇದನ್ನು ರಾಯಲ್ ಇಂಡಿಯನ್ ನೇವಿ ಎನ್ನುವ ಹೆಸರಿನಿಂದ ಕರೆಯಲಾಗಿತ್ತು. ಆದರೆ ಇದೀಗ ವಿಶ್ವದಲ್ಲೇ ಪ್ರಬಲವಾದ ಸೇನೆಯಾಗಿ ಭಾರತೀಯ ನೌಕಾಪಡೆಯು ಬೆಳೆದು ನಿಂತಿದೆ. ಭಾರತೀಯ ನೌಕಾಪಡೆಯೂ ವಿಶ್ವದ ಪ್ರಬಲ ನೌಕಾಪಡೆಗಳಲ್ಲಿ ತಾನೂ ಸ್ಥಾನವನ್ನು ಗಳಿಸಿಕೊಂಡಿದೆ. ಅಂಡಮಾನ್ ಹಾಗೂ ನಿಕೋಬಾರ್, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಗುಜರಾತ್, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಸುಮಾರು ಹನ್ನೊಂದಕ್ಕೂ ಹೆಚ್ಚು ನೌಕಾ ನೆಲೆಯನ್ನು ಹೊಂದಿದೆ. ಭಾರತೀಯ ನೌಕಾ ಪಡೆಯು ಐಎನ್ ಎಸ್ ವಿಕ್ರಮಾದಿತ್ಯ ಹಾಗೂ ಐಎನ್ ಎಸ್ ವಿಕ್ರಾಂತ್ ಎಂಬ ಪ್ರಬಲವಾದ ವಿಮಾನವಾಹಕ ನೌಕೆಗಳನ್ನು ಹೊಂದಿದೆ. ಭಾರತೀಯ ನೌಕಾಪಡೆಯು ದೇಶದ ಸಮುದ್ರ ಗಡಿಗಳನ್ನು ಭದ್ರಪಡಿಸುತ್ತವೆ. ಅದಲ್ಲದೇ, ಬಂದರು ಭೇಟಿಗಳು, ಹೂಡಿಕೆಗಳು, ವಿಪತ್ತು ಪರಿಹಾರ ಮತ್ತು ಹೆಚ್ಚಿನವುಗಳ ಮೂಲಕ ಭಾರತದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 1950 ರಲ್ಲಿ ಇದನ್ನು ಭಾರತೀಯ ನೌಕಾಪಡೆಯಾಗಿ ಮರುನಾಮಕರಣ ಮಾಡಲಾಯಿತು.
1971 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿನ ಸಾಧನೆಗಳಿಗಾಗಿ ಡಿಸೆಂಬರ್ 4 ಅನ್ನು ನೌಕಾಪಡೆ ದಿನವನ್ನಾಗಿ ಆಚರಿಸಲಾಗುತ್ತದೆ ಇದು ಭಾರತೀಯ ನೌಕಾಪಡೆಯ ವೀರ ಯೋಧರನ್ನು ಸ್ಮರಿಸಲು ಮತ್ತು ರಾಷ್ಟ್ರ ರಕ್ಷಣೆಯಲ್ಲಿ ಅವರ ಕೊಡುಗೆಗಳನ್ನು ಗೌರವಿಸಲು ಒಂದು ಮಹತ್ವದ ದಿನವಾಗಿದೆ.
1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ನಡೆಸಿದ 'ಆಪರೇಷನ್ ಟ್ರೈಡೆಂಟ್' ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯು ಶತ್ರು ರಾಷ್ಟ್ರದ ಕರಾಚಿ ಬಂದರಿನ ಮೇಲೆ ಯಶಸ್ವಿ ದಾಳಿ ನಡೆಸಿತು.
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನೌಕಾಪಡೆಯ ವೀರಯೋಧರಿಗೆ ಗೌರವ ಸಲ್ಲಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಈ ದಿನದಂದು ನೌಕಾಪಡೆಯ ವಿಜಯಗಳನ್ನು ನೆನಪಿಸಿಕೊಳ್ಳಲಾಗುತ್ತದೆ ಮತ್ತು ಯುದ್ಧನೌಕೆಗಳು ಹಾಗೂ ವಿಮಾನಗಳ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ,
1971ರಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಭಾರತೀಯ ನೌಕಾಪಡೆ ಆಪರೇಶನ್ ಟ್ರೈಡೆಂಟ್ ಮೂಲಕ ಪಾಕ್ ಸೇನೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ವೇಳೆಯಲ್ಲಿ ಮೂರು ಕ್ಷಿಪಣಿ ದೋಣಿಗಳಾದ INS ವೀರ್, INS ನಿಪತ್ ಮತ್ತು INS ನಿರ್ಘಾಟ್ ಗಳನ್ನು ಬಳಸಿಕೊಂಡಿತ್ತು. ಈ ಯುದ್ದದಲ್ಲಿ ಶತ್ರು ಸೈನ್ಯವಾದ ಪಾಕಿಸ್ತಾನಿ ನೌಕಾಪಡೆಯ ಹಡಗುಗಳನ್ನು ಮುಳುಗಿಸುವಲ್ಲಿ ಯಶಸ್ವಿಯಾಯಿತು. ಈ ವೇಳೆಯಲ್ಲಿ ಪಾಕಿಸ್ತಾನಿ ನೌಕಾಪಡೆ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಆಪರೇಷನ್ ಟ್ರೈಡೆಂಟ್ ಕಾರ್ಯಾಚರಣೆಯ ಸಂಪೂರ್ಣ ನೇತೃತ್ವವನ್ನು ಕಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ ವಹಿಸಿದ್ದು , ಕೊನೆಗೂ ಭಾರತೀಯ ನೌಕಾ ಪಡೆಯೂ ಯಶಸ್ವಿಯಾಯಿತು. ಮೇ 1972 ರಲ್ಲಿ ನಡೆದ ಹಿರಿಯ ನೌಕಾ ಅಧಿಕಾರಿಗಳ ಸಮ್ಮೇಳನದಲ್ಲಿ, 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಲು ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಕಾರ್ಯಾಚರಣೆ ಪ್ರಾರಂಭ ಮಾಡಿದ ದಿನದ ಸ್ಮರಣೆಗಾಗಿ ಹಾಗೂ ವಿವಿಧ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
1971 ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯದ ಸಂಭ್ರಮಕ್ಕೆ ಇಂದಿಗೆ 54 ವರ್ಷಗಳು ಸಂದಿವೆ. ಪ್ರತಿ ವರ್ಷ ಡಿಸೆಂಬರ್ 4 ರಂದು ದೇಶದ ಹೆಮ್ಮೆಯ ಭಾರತೀಯ ನೌಕಾ ಪಡೆಗಳ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಿ, ನೌಕಾಪಡೆಗೆ ಗೌರವವನ್ನು ಸಲ್ಲಿಸಲಾಗುತ್ತದೆ. ಈ ವರ್ಷ ನೌಕಾಪಡೆಯ ದಿನವನ್ನು 'ಕಾಂಬ್ಯಾಟ್ ರೆಡಿ, ಕೊಹೆಸಿವ್ ಆ್ಯಂಡ್ ಸೆಲ್ಫ್ ರಿಲಯಂಟ್' (ಸಮರ ಸನ್ನದ್ಧ, ಒಗ್ಗಟ್ಟು ಮತ್ತು ಸ್ವಾವಲಂಬಿ) ಎಂಬ ಥೀಮ್ ನ ಅಡಿಯಲ್ಲಿ ಆಚರಿಸಲಾಗುತ್ತಿದೆ. ಈ ಥೀಮ್ ನೌಕಾಪಡೆಯ ಮೂರು ಪ್ರಮುಖ ಲಕ್ಷಣಗಳಾದ ಸದಾ ಕಾರ್ಯಾಚರಣೆಗೆ ಸನ್ನದ್ಧವಾಗಿರುವುದು, ಏಕೀಕೃತ ಪಡೆಯಾಗಿ ಒಗ್ಗಟ್ಟಿನಿಂದ ಕಾರ್ಯಾಚರಿಸುವುದು, ಮತ್ತು ವಿದೇಶಗಳ ಮೇಲೆ ಅವಲಂಬಿಸುವುದರ ಬದಲು ನಮ್ಮದೇ ಶಕ್ತಿ ಮತ್ತು ತಂತ್ರಜ್ಞಾನಗಳನ್ನು ಬಳಸುವುದನ್ನು ಪ್ರತಿನಿಧಿಸುತ್ತದೆ.
ತಮ್ಮ ಜೀವದ ಹಂಗನ್ನು ತೊರೆದು, ದೇಶಕ್ಕಾಗಿ ಹೋರಾಡಿದವರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಮುಂಬೈಯ ಪ್ರಧಾನ ಕಚೇರಿಯಲ್ಲಿ ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾ ಕಮಾಂಡ್, ತಮ್ಮ ಹಡಗುಗಳು ಮತ್ತು ಸೈನಿಕರೆಲ್ಲರೂ ಒಟ್ಟಿಗೆ ಸೇರಿ ಈ ದಿನವನ್ನು ಆಚರಿಸುತ್ತದೆ. ಅದಲ್ಲದೇ, ಭಾರತೀಯ ನೌಕಾಪಡೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಗೇಟ್‌ವೇ ಆಫ್ ಇಂಡಿಯಾದಲ್ಲಿ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ನೌಕಾಪಡೆಯ ದಿನದ ಪ್ರಮುಖ ಆಚರಣೆಗಳು ತಿರುವನಂತಪುರದ ಷಣ್ಮುಗಂ ಸಮುದ್ರ ತೀರದಲ್ಲಿ ಡಿಸೆಂಬರ್ 3 ಹಾಗೂ 4ರಂದು ನೆರವೇರುತ್ತಿವೆ. ಹೆಚ್ಚಿನ ಜನರಿಗೆ ಅದರಲ್ಲೂ ದೇಶದ ವಿವಿಧ ಭಾಗಗಳ ಸಾಮಾನ್ಯ ಜನರಿಗೆ ನೌಕಾಪಡೆಯ ಸಾಮರ್ಥ್ಯವನ್ನು ಕಣ್ಣಾರೆ ನೋಡುವ ಅವಕಾಶ ನೀಡುವ ಸಲುವಾಗಿ ಉದ್ದೇಶಪೂರ್ವಕವಾಗಿಯೇ ಈ ವರ್ಷದ ಆಚರಣೆಗಳನ್ನು ಪ್ರಮುಖ ನೌಕಾನೆಲೆಗಳಿಂದ ಹೊರಗೆ ಆಚರಿಸಲಾಗುತ್ತಿದೆ.
*ಸಂಗ್ರಹ ಲೇಖನ*

0 Comments