ಮುಳ್ಳೇರಿಯಾ : ಕನ್ನಡ ಭಾಷೆ ,ಸಾಹಿತ್ಯ,ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 'ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದ ಅಂಗವಾಗಿ ಹಿರಿಯ ಕನ್ನಡ ಹೋರಾಟಗಾರ, ವೇಣುಗೋಪಾಲ ಕಾಸರಗೋಡು ಅವರ ಸಹೋದರ ಕೆ.ಎಂ ಗೋಪಾಲಕೃಷ್ಣ ಭಟ್ ಅವರನ್ನು ಮುಳ್ಳೇರಿಯಾದ ಬಳಿಯಲ್ಲಿರುವ ಅವರ ನಿವಾಸ 'ಭಾಗ್ಯಶ್ರೀ'ಯಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಗೋಪಾಲಕೃಷ್ಣ ಭಟ್ ಅವರನ್ನು ಶಾಲು ಹೊದೆಸಿ ಅಭಿನಂದಿಸಿದರು. ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಅಭಿನಂದನಾ ಭಾಷಣ ಮಾಡಿದರು. ಗಡಿನಾಡಿನ ಕನ್ನಡಿಗರ ಸಮಸ್ಯೆಗಳ ಕುರಿತು ಸರಕಾರಕ್ಕೆ, ಸಂಬಂಧಪಟ್ಟ ಇಲಾಖೆಗಳಿಗೆ ಹಲವಾರು ಮನವಿಗಳನ್ನು ಇವರು ಸಲ್ಲಿಸಿದ್ದಾರೆ. ಮಾತ್ರವಲ್ಲದೆ ವಿವಿಧ ಪತ್ರಿಕೆಗಳಲ್ಲಿ ಲೇಖನ ಬರೆದು ಕನ್ನಡಿಗರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದು ಗೋಪಾಲಕೃಷ್ಣ ಭಟ್ ಹೇಳಿದರು. ನಿವೃತ್ತ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಅವರು ಮಾತನಾಡಿ, ಹಿರಿಯ ನಾಗರಿಕ ವೇದಿಕೆಯ ಮುಳ್ಳೇರಿಯಾ ಘಟಕದ ಅಧ್ಯಕ್ಷರಾಗಿ ಮತ್ತು ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಸಕ್ರಿಯ ಕಾರ್ಯಕರ್ತರಾಗಿ ಕೆ.ಎಂ ಗೋಪಾಲಕೃಷ್ಣ ಭಟ್ಟರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರ ನಾರಾಯಣ ಭಟ್, ಲೋಕ ಸೇವಾ ಆಯೋಗದ ನಿವೃತ್ತ ಅಧೀನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಣೂರು, ನಿವೃತ್ತ ಪ್ರಾಂಶುಪಾಲ ಬೇ.ಸೀ ಗೋಪಾಲಕೃಷ್ಣ, ಡಾ.ನರೇಶ್ ಮುಳ್ಳೇರಿಯಾ ಮಾತನಾಡಿದರು.ನಿವೃತ್ತ ಮುಖ್ಯ ಶಿಕ್ಷಕ ಸುಧೀರ್ ಕುಮಾರ್ ರೈ ಮುಳ್ಳೇರಿಯಾ, ಕ್ಯಾಂಪ್ಕೋ ನಿರ್ದೇಶಕ, ಸತ್ಯನಾರಾಯಣ ಪ್ರಸಾದ್, ನಿವೃತ್ತ ಮುಖ್ಯಶಿಕ್ಷಕ ರಾಧಾಕೃಷ್ಣ.ಎಂ, ಪಾಂಡಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕಿ ದಿವ್ಯಗಂಗಾ .ಪಿ, ಬಾಬು ದೇಲಂಪಾಡಿ. ಮೀನಾಕ್ಷಿ, ಚಿನ್ಮಯಕೃಷ್ಣ ಉಪಸ್ಥಿತರಿದ್ದರು. ಕೆ.ಎಂ ಗೋಪಾಲಕೃಷ್ಣ ಭಟ್ಟರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ ನಿರೂಪಿಸಿದರು. ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ರಾಜಾರಾಮ ಕಾಟಿಪಳ್ಳ ವಂದಿಸಿದರು .

0 Comments