ಮಕರಜ್ಯೋತಿ ಮಹೋತ್ಸವಕ್ಕೆ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಸಜ್ಜುಗೊಂಡಿದೆ. ಇಂದು ಆನ್‌ಲೈನ್ ಬುಕ್ಕಿಂಗ್ ಮೂಲಕ 35 ಸಾವಿರ ಮತ್ತು ಸ್ಪಾಟ್ ಬುಕ್ಕಿಂಗ್ ಮೂಲಕ 5 ಸಾವಿರ ಭಕ್ತರಿಗೆ ಸನ್ನಿಧಾನ ಪ್ರವೇಶಿಸಲು ಅನುಮತಿ ನೀಡಲಾಗಿದೆ. ನಾಳೆ ಮಕರಜ್ಯೋತಿ ಪ್ರಯುಕ್ತ ಶಬರೀಶನಿಗೆ ತೊಡಿಸಲಾಗುವ ತಿರುವಾಭರಣಗಳ ಮೆರವಣಿಗೆ ಜ.12ರಂದು ಮಧ್ಯಾಹ್ನ 1 ಗಂಟೆಗೆ ಪಂದಳಂ ವಲಿಯ ಕೋಯಿಕ್ಕಲ್ ಶ್ರೀಧರ್ಮ ಶಾಸ್ತಾ ದೇವಸ್ಥಾನದಿಂದ ಹೊರಟಿದ್ದು, ಜ.14ರಂದು ಸನ್ನಿಧಾನ ತಲುಪಲಿದೆ.
ಈ ಬಾರಿ ಪಂದಳಂ ಅರಮನೆಯ ರಾಜಪ್ರತಿನಿಧಿಯಾಗಿ ಪುನರ್ಧನಾಳ್ ನಾರಾಯಣವರ್ಮ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾರೆ. ಗುರುಸ್ವಾಮಿ ಮರುದಮನ ಶಿವನಕುಟ್ಟಿ ನೇತೃತ್ವದಲ್ಲಿ 26 ಮಂದಿಯ ತಿರುವಾಭರಣ ವಾಹಕ ಸಂಘ ಮತ್ತು ನಾಲ್ವರು ಸಹಾಯಕರ ಸಹಿತ 30 ಸದಸ್ಯರ ತಂಡ ತಿರುವಾಭರಣ ಪೆಟ್ಟಿಗೆಯನ್ನು ಹೊತ್ತು ಶಬರಿಮಲೆಗೆ ತರಲಿದ್ದಾರೆ. ಮಕರಜ್ಯೋತಿ ದಿನ ಜ.14ರಂದು ಸಂಜೆ 6.30ಕ್ಕೆ ಮೆರವಣಿಗೆ ಸನ್ನಿಧಾನ ತಲುಪಲಿದೆ. ಪ್ರಧಾನ ಪೆಟ್ಟಿಗೆಯನ್ನು ಅಯ್ಯಪ್ಪ ದೇಗುಲ ಮತ್ತು ಉಳಿದ ಎರಡು ಪೆಟ್ಟಿಗೆಗಳನ್ನು ಮಣಿಮಂಟಪಕ್ಕೆ ತರಲಾಗುವುದು.
ಭಕ್ತರ ಸುರಕ್ಷತೆ ಭಾಗವಾಗಿ ನಿರ್ದಿಷ್ಟ ಜಾಗಗಳಲ್ಲಿ ಮಾತ್ರ ಮಕರಜ್ಯೋತಿ ವೀಕ್ಷಿಸಲು ಅವಕಾಶವಿದೆ. ಸನ್ನಿಧಾನ, ಪಾಂಡಿತಾವಳಂ, ಪುಲ್ಲುಮೇಡ್, ಅಟ್ಟತ್ತೋಡ್ ಮತ್ತು ಇಳವುಂಗಾಲ್ ಪ್ರದೇಶಗಳಲ್ಲಿ ಜ್ಯೋತಿ ವೀಕ್ಷಿಸಬಹುದಾಗಿದೆ. ಪ್ರಧಾನ ಪೆಟ್ಟಿಗೆಯಲ್ಲಿರುವ ತಿರುವಾಭರಣಗಳನ್ನು ಅಯ್ಯಪ್ಪನ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ಮಾಡಲಾಗುವುದು. ಮುಸ್ಸಂಜೆ ಆಗಸದಲ್ಲಿ ಮಕರಜ್ಯೋತಿ ಗೋಚರಿಸಿದ ತಕ್ಷಣ ಪೊನ್ನಂಬಲಮೇಡ್ ಬೆಟ್ಟದಲ್ಲಿ ಮೂರು ಬಾರಿ ಮಕರ ಜ್ಯೋತಿ ಬೆಳಗಲಿದೆ. ಜ.18ರಂದು ಪಂದಳಂ ಅರಮನೆ ವತಿಯಿಂದ ಕಳಭಾಭಿಷೇಕ, ಜ.19ರಂದು ರಾಜಪ್ರತಿನಿಧಿಯ ಉಪಸ್ಥಿತಿಯಲ್ಲಿ ಗುರುತಿ ಪೂಜೆ, ರಾತ್ರಿ ದೇಗುಲ ಮುಚ್ಚುವವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಜ.20ರಂದು ಬೆಳಗ್ಗೆ 6ಕ್ಕೆ ರಾಜಪ್ರತಿನಿಧಿಯ ದರ್ಶನದ ಬಳಿಕ ದೇಗುಲ ಮುಚ್ಚಲಾಗುತ್ತದೆ.

0 Comments