ರಾಮಕುಂಜದಲ್ಲಿ ತಂದೆ ಕೌಟುಂಬಿಕ ಕಲಹ ಕೋವಿ ಗುಂಡಿನಲ್ಲಿ ಪರ್ಯಾವಸಾನ
ರಾಮಕುಂಜ : ತಂದೆ ಮಗನ ನಡುವೆ ನಡೆದ ಆಸ್ತಿ ವಿವಾದವೊಂದು ಕೋವಿ ಗುಂಡಿನಲ್ಲಿ ಪರ್ಯಾವಸಾನಗೊಂಡ ಘಟನೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಕೋವಿಯ ಗುಂಡು ತಗುಲಿ ಮೃತಪಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದ್ದು ಇದೇ ವೇಳೆ ಬಾಲಕನ ತಂದೆಯೂ ಚೂರಿ ಇರಿತದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ನಡೆದ ಕೌಟುಂಬಿಕ ಕಲಹದಿಂದ ಈ ಪ್ರಕರಣ ನಡೆದಿರುವ
ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು ಮೂಲತಃ ಎಣ್ಮಕಜೆಯ ಸೇರಾಜೆ ನಿವಾಸಿ ಪ್ರಸ್ತುತ ರಾಮಕುಂಜದ ಪಾದೆ ಎಂಬಲ್ಲಿ ವಾಸಿಸುತ್ತಿರುವ ಕೃಷಿಕ ವಸಂತ್ ಅಮೀನ್ ಪುತ್ರ ಮೋಕ್ಷ (17) ಮೃತ ಬಾಲಕ.
ತಂದೆ ಮತ್ತು ಮಗನ ಮಧ್ಯೆ ಮನೆಯಲ್ಲಿ ಪರಸ್ಪರ ಜಗಳ ನಡೆದ ಮಾಹಿತಿಯಿದ್ದು ಈ ವೇಳೆ ಕೋವಿಯಿಂದ ಗುಂಡು ಹಾರಿದ್ದು, ಗುಂಡು ತಗುಲಿ ಬಾಲಕ ಸಾವು ಸಂಭವಿಸಿರುವುದು ದೃಢವಾಗಿದೆ. ಇದೇ ವೇಳೆ ಬಾಲಕನ ಸಾವಿಗೆ ಕಾರಣ ಬಾಲಕನೇ ಸ್ವತಃ ಶೂಟ್ ಮಾಡಿಕೊಂಡಿದ್ದಾ ಅಥವಾ ತಂದೆಯೇ ಶೂಟ್ ಮಾಡಿದ್ದ ಎಂಬ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಗಲಾಟೆಯಲ್ಲಿ ತಂದೆ ವಸಂತ್ ಅಮೀನ್ ಗೂ ಚೂರಿ ಇರಿತದ ಗಾಯವಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದೆ. ಮೂಲತಃ ಪೆರ್ಲ ಸಮೀಪದ ಸೇರಾಜೆ ನಿವಾಸಿಯಾಗಿದ್ದ ವಸಂತ ಅಮೀನ್ ಕಳೆದ ಹಲವು ವರ್ಷಗಳ ಹಿಂದೆ ಇಲ್ಲಿನ ಆಸ್ತಿ ಪಾಲಾಗಿ ದೂರದ ಬೆಟ್ಟಂಪಾಡಿ ಸಮೀಪದ ನಿಡ್ಪಳ್ಳಿಯಲ್ಲಿ ಜಾಗ ಖರೀದಿಸಿದ್ದರು. ಬಳಿಕ ಅಲ್ಲಿಂದ ಮಾರಿ ರಾಮಕುಂಜದ ಪಾದೆ ಎಂಬಲ್ಲಿ ಸ್ಥಳ ಖರೀದಿಸಿ ವಾಸವಾಗಿದ್ದರು. ಈ ನಡುವೆ
ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಮೋಕ್ಷ ತಂದೆಯೊಂದಿಗೆ ಮನೆಯವಲ್ಲಿದ್ದ. ಇವರ ಮನೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಗಾಗೆ ಜಗಳವಾಗುತ್ತಿದ್ದು ಮೃತ ಮೋಕ್ಷ್ ನ ತಾಯಿ ಜಯಶ್ರೀ ಇದೇ ಕಾರಣಕ್ಕೆ ತವರು ಮನೆ ಸೇರಿದ್ದರು ಎನ್ನಲಾಗಿದೆ. ಈ ಮಧ್ಯೆ ಶನಿವಾರ ಮಧ್ಯಾಹ್ನ ಬಾಲಕ ಮೋಕ್ಷ್ ನನ್ನು ಆಸ್ಪತ್ರೆಗೆಂದು ಕರೆದುಕೊಂಡು ಹೋಗಲಾಗಿದ್ದು ಬಾಲಕ ತಾಯಿಗೆ ಪೋನ್ ಮಾಡಿ ಹೇಳಿದ್ದ. ಮಧ್ಯಾಹ್ನ ಬಳಿಕ ಮನೆಗೆ ಮರಳಿದ್ದು ಬಾಲಕ ತಾಯಿಯೊಂದಿಗೆ ತವರು ಮನೆಗೆ ಹೋಗಿ ವಾಸಿಸುವ ಇಚ್ಛೆ ವ್ಯಕ್ತಪಡಿಸಿದ್ದು ಈ ಕಾರಣ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಸುಮಾರು 4.20ರ ವೇಳೆಗೆ ಬಾಲಕನ ತಂದೆ ವಸಂತ ಅಮೀನ್ ಮೋಕ್ಷ ನ ಮಾವನಿಗೆ ಪೋನ್ ಮಾಡಿ ಗಲಾಟೆಯ ಬಗ್ಗೆ ತಿಳಿಸಿದ್ದು ಇವರು ತಲುಪಿದಾಗ ಬಾಲಕ ಕೋವಿ ಗುಂಡು ತಗುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಲಕನ ಸಾವಿಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ ಕಡಬ ಠಾಣೆ ಪೊಲೀಸರಿಂದ ಘಟನೆ ನಡೆದ ಸ್ಥಳದಲ್ಲಿ ತನಿಖೆ ನಡೆಯುತ್ತಿದೆ. ಮೃತದೇಹವನ್ನು ಎಣ್ಮಕಜೆಯ ತಾಯಿಯ ತವರು ಮನೆ ಸಮೀಪ ಅಂತಿಮ ಸಂಸ್ಕಾರ ನಡೆಸಲಾಗುತ್ತಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

0 Comments