ಫೆಬ್ರವರಿ 14 ಎಂದರೆ ಜಗತ್ತಿಗೆ ಪ್ರೇಮಿಗಳ ದಿನ. ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಸಂಭ್ರಮಿಸುವ ದಿನ. ಆದರೆ ಭಾರತೀಯರ ಪಾಲಿಗೆ ಈ ದಿನದ ನೆನಪು ಕೇವಲ ಪ್ರೀತಿಯಲ್ಲ, ಅದು ಎದೆಯಾಳದ ನೋವು ಮತ್ತು ದೇಶಪ್ರೇಮದ ಕಿಚ್ಚು. 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆ ಭೀಕರ ಉಗ್ರರ ದಾಳಿ ಭಾರತದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಕಪ್ಪು ಚುಕ್ಕೆ. ಭಾರತೀಯರ ಪಾಲಿಗೆ ಅದು ಎಂದಿಗೂ ಮರೆಯಲಾಗದ, ಎದೆಯಾಳದಲ್ಲಿ ನೋವು ಉಳಿಸಿಹೋದ ಕರಾಳ ದಿನ. ಜಗತ್ತೆಲ್ಲಾ ಪ್ರೀತಿಯ ಸಂಭ್ರಮದಲ್ಲಿದ್ದರೆ, ಭಾರತದ ವೀರ ಪುತ್ರರು ದೇಶಕ್ಕಾಗಿ ರಕ್ತವನ್ನೇ ಹರಿಸಿದ ದಿನವಿದು.
ಆ ದಿನ ಮಧ್ಯಾಹ್ನ ಸುಮಾರು 3:15. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 78 ವಾಹನಗಳಿದ್ದ CRPF ಯೋಧರ ಬೆಂಗಾವಲು ಪಡೆ ಸಂಚರಿಸುತ್ತಿತ್ತು. ಸುಮಾರು 2,500ಕ್ಕೂ ಹೆಚ್ಚು ಯೋಧರು ರಜೆಯನ್ನು ಮುಗಿಸಿ ತಮ್ಮ ಕರ್ತವ್ಯಕ್ಕೆ ಮರಳುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಲಟುಪೋರಾ ಎಂಬಲ್ಲಿ ಸ್ಫೋಟಕಗಳನ್ನು ತುಂಬಿದ್ದ ಕಾರೊಂದು ಯೋಧರಿದ್ದ ಬಸ್‌ಗೆ ಅಪ್ಪಳಿಸಿತು. ನೋಡನೋಡುತ್ತಿದ್ದಂತೆ ಇಡೀ ಪ್ರದೇಶ ಸ್ಫೋಟದ ತೀವ್ರತೆಗೆ ನಲುಗಿಹೋಯಿತು. ಸ್ಫೋಟದ ಸದ್ದು ಕಿಲೋಮೀಟರ್‌ಗಳವರೆಗೆ ಕೇಳಿಸಿತ್ತು. ಈ ಹೇಯ ಕೃತ್ಯಕ್ಕೆ ನಮ್ಮ ನಾಡಿನ 40 ಮಂದಿ ಸಿಆರ್‌ಪಿಎಫ್ (CRPF) ಯೋಧರು ವೀರಮರಣ ಅಪ್ಪಿದರು. ವೀರ ಯೋಧರ ಮನೆಗಳಲ್ಲಿ ಹೆಂಡತಿ, ತಂದೆ-ತಾಯಿ, ಮಕ್ಕಳು ಹಾದಿ ಕಾಯುತ್ತಿದ್ದಾಗ ಬಂದಿದ್ದು ಅವರ ಸಾವಿನ ಸುದ್ದಿ. ನೂರಾರು ಕನಸುಗಳು ಅಂದು ಪುಲ್ವಾಮಾದ ರಸ್ತೆಯಲ್ಲಿ ಮಣ್ಣಾದವು. ಜೈಶ್-ಎ-ಮೊಹಮ್ಮದ್ ಎಂಬ ಉಗ್ರಗಾಮಿ ಸಂಘಟನೆ ಈ ಹೇಯ ಕೃತ್ಯದ ಹೊಣೆ ಹೊತ್ತುಕೊಂಡಿತು. ಇಡೀ ದೇಶವೇ ಕಣ್ಣೀರಲ್ಲಿ ಮುಳುಗಿತು. ಪ್ರತಿಯೊಬ್ಬ ಭಾರತೀಯನ ರಕ್ತವೂ ಅಂದು ಕುದಿದಿತ್ತು. ಇದು ಕೇವಲ ಸೈನಿಕರ ಮೇಲಿನ ದಾಳಿಯಲ್ಲ, ಇದು ಭಾರತದ ಅಸ್ಮಿತೆಯ ಮೇಲಿನ ದಾಳಿಯಾಗಿತ್ತು.
ಪುಲ್ವಾಮಾ ದಾಳಿಯ ನೋವು ಇನ್ನೂ ಹಸಿಯಾಗಿರುವಾಗಲೇ, ಭಾರತೀಯ ವಾಯುಪಡೆ ಕೇವಲ 12 ದಿನಗಳಲ್ಲಿ (ಫೆಬ್ರವರಿ 26) ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿತು. ಇದು ಭಾರತದ ಸೇನಾ ಶಕ್ತಿಯನ್ನು ಜಗತ್ತಿಗೆ ಸಾರಿತು. ಪುಲ್ವಾಮಾ ದಾಳಿಯು ನಮಗೆ ಒಂದು ದೊಡ್ಡ ಪಾಠವನ್ನು ಕಲಿಸಿದೆ. ಗಡಿಯಲ್ಲಿ ಸೈನಿಕರು ಮಳೆ, ಗಾಳಿ, ಚಳಿ ಎನ್ನದೆ ಹಗಲು-ರಾತ್ರಿ ಕಾಯುತ್ತಿರುವುದರಿಂದಲೇ ನಾವು ಇಂದು ಸುರಕ್ಷಿತವಾಗಿ ಮನೆಯಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಇಂದಿನ ಈ ದಿನವನ್ನು ಕೇವಲ ಪ್ರೇಮಿಗಳ ದಿನವನ್ನಾಗಿ ಆಚರಿಸುವ ಬದಲು, ದೇಶಕ್ಕಾಗಿ ಪ್ರಾಣ ನೀಡಿದ ಆ 40 ವೀರ ಯೋಧರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಫೆಬ್ರವರಿ 14ರ ಪ್ರೀತಿಯ ಸಂಭ್ರಮದ ನಡುವೆ ಒಂದು ಕ್ಷಣ ಈ ವೀರ ಯೋಧರಿಗಾಗಿ ಮೌನಾಚರಣೆ ಮಾಡೋಣ. ಹುತಾತ್ಮ ಯೋಧರ ಕುಟುಂಬಗಳಿಗೆ ನಮ್ಮ ಕೈಲಾದ ಗೌರವ ಮತ್ತು ಸಹಕಾರ ನೀಡೋಣ. ಗಡಿಯಲ್ಲಿ ಯೋಧರು ಎಚ್ಚರವಾಗಿರುವುದಕ್ಕೇ ನಾವು ಇಲ್ಲಿ ನೆಮ್ಮದಿಯಾಗಿದ್ದೇವೆ ಎಂಬ ಸತ್ಯವನ್ನು ಮರೆಯದಿರೋಣ. ಪ್ರೀತಿ ಎನ್ನುವುದು ಕೇವಲ ವೈಯಕ್ತಿಕವಲ್ಲ, ಅದು ದೇಶದ ಮೇಲಿನ ಭಕ್ತಿಯೂ ಹೌದು. ಈ ಫೆಬ್ರವರಿ 14ರಂದು ಗುಲಾಬಿ ಹೂವಿನ ಜೊತೆಗೆ ನಮ್ಮ ಸೈನಿಕರ ತ್ಯಾಗಕ್ಕೆ ಒಂದು ಸೆಲ್ಯೂಟ್ ಹೊಡೆಯೋಣ. ದೇಶಕ್ಕಾಗಿ ಪ್ರಾಣ ಕೊಡುವುದು ಶ್ರೇಷ್ಠ, ಆ ತ್ಯಾಗವನ್ನು ಸ್ಮರಿಸುವುದು ಅದಕ್ಕಿಂತಲೂ ಶ್ರೇಷ್ಠ.
ವನಜಾಕ್ಷಿ ಪಿ. ಚೆಂಬ್ರಕಾನ

0 Comments