ಕಾಸರಗೋಡು : ಜಗದ್ಗುರು ಶ್ರೀಶಂಕರಾಚರ್ಯ ಸಂಸ್ಥಾಪನದ ಶ್ರೀವಿಷ್ಣುಮಂಗಲ ಕ್ಷೇತ್ರ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಐದು ದಿನಗಳಲ್ಲಾಗಿ ನಡೆದು ಸಂಪನ್ನಗೊಂಡಿತು. ಎಡನೀರು ಮಠಾಧೀಶರಾದ ಶ್ರೀಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹೋತ್ಸವ ಜರಗಿತು.
ತುಲಾಭಾರ ಸೇವೆ, ಶ್ರೀಭೂತ ಬಲಿ, ದೀಪೋತ್ಸವ,ಸಿಡಿಮದ್ದು ಪ್ರದರ್ಶನ ಜರಗಿತು. ಶೈವ ಹಾಗೂ ವೈಷ್ಣವ ಆರಾಧನೆಯ ಸಂಗಮ ಭೂಮಿಯಾದ ವಿಷ್ಣು ಮಂಗಲ ಕ್ಷೇತ್ರದ ತಿಡಂಬು ನೃತ್ತ ಎಂಬ ಎರಡು ದೇವರನ್ನು ಹೊತ್ತ ನೃತ್ಯ ಬಲಿ ನೋಡಿ ಕೃತಾರ್ಥರಾಗಲು ವಿವಿದೆಡೆಯ ಜನ ಸಾಗರ ಹರಿದು ಬಂದಿತ್ತು. ಇದೇ ಸಂದರ್ಭದಲ್ಲಿ ಎಡನೀರು ಶ್ರೀ ಮಠದ ಮುಂಭಾಗದಲ್ಲಿ ನಡೆದ ಪುಷ್ಪ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರತಿದಿನ ವಿವಿಧ ಸಾಂಸ್ಕೃತಿಕ ಪ್ರದರ್ಶನದ ಜರಗಿದವು. ಉತ್ಸವದ ಕೊನೆಯ ದಿನವಾದ ಸೋಮವಾರ ಸಂಜೆ ವಿಷ್ಣು ಮಂಗಲ ಕ್ಷೇತ್ರದ ಎರಡು ದೇವರುಗಳನ್ನು ಶ್ರೀಮಠದ ಮುಂಭಾಗ ವಾದ್ಯಘೋಷಗಳೊಡನೆ ಕರೆ ತಂದು ನೃತ್ತ ಉತ್ಸವ ನಡೆಸಲಾಯಿತು. ಬಳಿಕ ಮಧುವಾಹಿನಿ ಹೊಳೆಯಲ್ಲಿ ನಡೆದ ತೆಪ್ಪೊತ್ಸವದಲ್ಲಿ ಎಡನೀರು ಜಾತ್ರೆಯ ಕೊನೆಯ ಕ್ಷಣವನ್ನು ಕಣ್ತುಂಬಿಸಿಕೊಂಡರು. ಬಳಿಕ ಶ್ರೀದೇವರ ಅವಭೃತ ಸ್ನಾನದೊಂದಿಗೆ ಧ್ವಜಾವರೋಹಣದ ಮೂಲಕ ಉತ್ಸವ ಸಮಾಪ್ತಿಗೊಂಡಿತು.



0 Comments