ಕಾಸರಗೋಡು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ನಂತರ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಕಾಸರಗೋಡು ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪರಿಷ್ಕೃತ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಈಗ ಒಟ್ಟು 10,96,241 ಮತದಾರರಿದ್ದಾರೆ. ಹಿಂದಿನ ಕರಡು ಪಟ್ಟಿಗೆ ಹೋಲಿಸಿದರೆ ಇದು 74,896 ಜನರ ಹೆಚ್ಚಳವಾಗಿದೆ. ಅಂತಿಮ ಪಟ್ಟಿಯಲ್ಲಿರುವ ಅಂಕಿಅಂಶಗಳು ಸಂಕ್ಷಿಪ್ತವಾಗಿ - ಪುರುಷ ಮತದಾರರು - 5,40,698 ಮಹಿಳಾ ಮತದಾರರು- 5,55,530 ಟ್ರಾನ್ಸ್ಜೆಂಡರ್ ಮತದಾರರು - 13 ಅಂತಿಮ ಪಟ್ಟಿಯಲ್ಲಿ 37580 ಪುರುಷ ಮತದಾರರು, 37313 ಮಹಿಳಾ ಮತದಾರರು ಮತ್ತು ಮೂವರು ಟ್ರಾನ್ಸ್ಜೆಂಡರ್ ಮತದಾರರು ಸೇರಿದ್ದಾರೆ, ಇದು 74896 ಮತದಾರರ ಹೆಚ್ಚಳವಾಗಿದೆ. ಕರಡು ಪಟ್ಟಿಯನ್ನು ಪ್ರಕಟಿಸಿದಾಗ, ಮತದಾರರ ಸಂಖ್ಯೆ 1078256 ಆಗಿತ್ತು. ಬಳಿಕದ ಆಕ್ಷೇಪ, ದೂರುಗಳನ್ನು ಪರಿಗಣಿಸಿ ಮತ್ತು ಹೊಸ ಅರ್ಜಿಗಳನ್ನು ಸ್ವೀಕರಿಸಿದ ನಂತರ ಮತದಾರರ ಸಂಖ್ಯೆ ಪ್ರಸ್ತುತ ಮಟ್ಟಕ್ಕೆ ಏರಿತು.
ರಾಜ್ಯ ಮಟ್ಟದಲ್ಲಿ ಮತದಾರರ ಪಟ್ಟಿ ನವೀಕರಣ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಕಾಸರಗೋಡು ಜಿಲ್ಲೆ ಉತ್ತಮ ರೀತಿಯ ಪ್ರಗತಿ ನೀಡಿದೆ. ಈ ಸಾಧನೆಗೆ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ 24/7 ಶ್ರಮ ಕಾರಣ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಪಟ್ಟಿಯಲ್ಲಿ ನಕಲಿ ಮತಗಳು ಕಂಡುಬಂದರೆ, 'ಫೋರಂ 7' ಬಳಸಿ ಅವುಗಳನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು. ಪಟ್ಟಿಯಲ್ಲಿ ಹೆಸರುಗಳಿಲ್ಲದವರು ಚಿಂತಿಸಬೇಕಾಗಿಲ್ಲ. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಕ್ಕಿಂತ ಹತ್ತು ದಿನಗಳ ಮೊದಲು ನಿಮ್ಮ ಹೆಸರನ್ನು ಸೇರಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ತಿಳಿಸಿದರು.

0 Comments