ಪೆರ್ಲ: ಬಜಕೂಡ್ಲು ಪರ್ಪಕರಿಯದಲ್ಲಿ ನಡೆದ ವಿವಾಹಾನಂತರ ಸತ್ಕಾರ ಕೂಟವೊಂದರ ಪ್ರತ್ಯೇಕ ವೇದಿಕೆಯಲ್ಲಿ ಶೃಂಗರಿಸಿ ಇಡಲಾಗಿದ್ದ ಬಜಾಜ್ "ಎಂ-80" ಮೋಪೆಡ್ ಕಾರ್ಯಕ್ರಮಕ್ಕೆ ಆಗಮಿಸಿದ ಜನಕ್ಕೆ ಕೌತುಕದ ಕ್ಷಣವಾಯಿತು. ಬಜಕೂಡ್ಲು ನಿವಾಸಿ ದಿ. ಅಮ್ಮು ರೈಗಳ ಪುತ್ರ ನವೀನ್ ರೈ ಅವರ ವಿವಾಹದ ಸತ್ಕಾರ ಕೂಟದ ಪ್ರತ್ಯೇಕ ವೇದಿಕೆಯಲ್ಲಿ ಇಡಲಾಗಿದ್ದ ಮೋಪೆಡ್ ಬೈಕ್ ಆಹ್ವಾನಿತ ಬಂಧುಗಳ ಗಮನ ಸೆಳೆದಿದೆ. ಕೇರಳ ತೋಟಗಾರಿಕಾ ನಿಗಮದ ಗೇರುತೋಟದಲ್ಲಿ ಕೆಲಸದಲ್ಲಿದ್ದ ದಿ.ಅಮ್ಮು ರೈಗಳು ದೀರ್ಘಕಾಲ ಬಜಾಜ್ "ಎಂ-80" ಮೋಪೆಡ್ ಬಳಸಿದ್ದರು. ಅವರ ನಿಧನದ ಬಳಿಕವೂ, ಮಕ್ಕಳು ವಾಹನವನ್ನು ಮಾರಾಟ ಮಾಡದೆ ಉತ್ತಮ ರೀತಿಯಲ್ಲಿ ನಿರ್ವಹಿಸಿ ಇಟ್ಟುಕೊಂಡಿದ್ದರು. ಅಮ್ಮು ರೈಗಳ ಪುತ್ರ ನವೀನ್ ಅವರ ವಿವಾಹ ಬಜಕೂಡ್ಲು ದೇವಳದಲ್ಲಿ ಇತ್ತೀಚೆಗೆ ನಡೆದಿತ್ತು. ಬಳಿಕ ಪರ್ಪಕರಿಯದ ಮನೆಯಲ್ಲಿ ನಡೆದ ವಿವಾಹಾನಂತರ ಸತ್ಕಾರ ಕೂಟದಲ್ಲಿ ಅಮ್ಮು ರೈಗಳ ಸ್ಮರಣಾರ್ಥ ಅವರು ಬಳಸಿದ್ದ "ಎಂ-80" ಮೋಪೆಡ್ ಬೈಕನ್ನು ಅಲಂಕರಿಸಿ ಪ್ರತ್ಯೇಕ ವೇದಿಕೆಯಲ್ಲಿ ಇಟ್ಟಿರುವುದು . ತಂದೆಯ ಮೇಲಿನ ಪ್ರೀತಿಯನ್ನು ಮಕ್ಕಳು ಈ ರೀತಿ ತೋರ್ಪಡಿಸಿದ್ದು, ಸಮಾರಂಭದಲ್ಲಿ ಭಾಗವಹಿಸಿದವರು ಶ್ಲಾಘಿಸಿದ್ದಾರೆ.

0 Comments