ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆ ಇಡೀ ಜಗತ್ತಿನ ಗಮನ ಸೆಳೆದಿದೆ. ಆದರೆ, ಶೃಂಗಸಭೆಯ ಕೊನೆಯ ದಿನ ಯುವ ಕಾಂಗ್ರೆಸ್ ಪಕ್ಷದ 10ಮಂದಿ ಕಾರ್ಯಕರ್ತರು ಅಂಗಿ ತೆಗೆದು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು, ಬಿಜೆಪಿಗರನ್ನು ಕೆರಳಿಸಿದೆ. ಶೃಂಗಸಭೆ ನಡೆಯುತ್ತಿರುವ ಸ್ಥಳದಲ್ಲೇ ಹತ್ತು ಮಂದಿ ದಿಢೀರನೇ ಶರ್ಟ್ ಬಿಚ್ಚಿ, ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಕಾಂಗ್ರೆಸ್ಸಿಗರ ಈ ವರ್ತನೆಯನ್ನು ಖಂಡಿಸಿ ಇಂದು ದೆಹಲಿ, ಮುಂಬೈ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಬಿಜೆಪಿ ಕಾರ್ಯಕರ್ತರು ಯತ್ನಿಸಿದರು. ದೆಹಲಿ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಥಾಣೆಯಲ್ಲಿ ರಾಹುಲ್ ಗಾಂಧಿಗೆ ಕಪ್ಪುಪಟ್ಟಿ ಪ್ರದರ್ಶಿಸಲಾಯಿತು. ಇದಲ್ಲದೇ ಮುಂಬೈ, ಸೂರತ್, ಜೈಪುರ್, ಜಮ್ಮುವಿನಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕದ ಹಲವೆಡೆಗಳಲ್ಲಿ ಪ್ರತಿಭಟನಾ ರ‍್ಯಾಲಿಗಳು ನಡೆಯಿತು. ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಚೇರಿಗೆ ನುಗ್ಗಲು ಹೊರಟ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಕಾಂಗ್ರೆಸ್ ಪ್ರತಿಭಟನಾ ರೀತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.


0 Comments