ಉಜಿರೆ : ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಫೆ.14ರಂದು ಹಮ್ಮಿಕೊಂಡಿದ್ದ ತಿಥಿಯ ಅಡುಗೆಗೆ ಆಮೆಯ ಮಾಂಸ ಮಾಡಲು ನದಿಯಲ್ಲಿ ಬೇಟೆಯಾಡಿದ ಆರೋಪದಲ್ಲಿ ನಾಲ್ಕು ಆಮೆ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಪೆರಡಾಲ ನಿವಾಸಿ ಮಣಿಕಂಠ, ಮಂಗಳೂರು ನಗರದ ಮೂಲ್ಕಿ ತಾಲ್ಲೂಕಿನ ನೆಲ್ಲಿಗುಡ್ಡೆ ನಿವಾಸಿ ರಾಜೇಂದ್ರ, ಮೂಡುಬಿದಿರೆ ತಾಲ್ಲೂಕಿನ ಶಿರ್ತಾಡಿ ಗ್ರಾಮದ ವಿಪ್ಪೇಶ್ ಮತ್ತು ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಗ್ರಾಮದ ನಿವಾಸಿ ಪ್ರಶಾಂತ್ ಬಂಧಿತ ಆರೋಪಿಗಳು. ಅವರು ಸಂಬಂಧಿಕರಾದ ಉಜಿರೆ ಗ್ರಾಮದ ಕುಂಟಿನಿ ನಿವಾಸಿಯಾಗಿದ್ದ ಅಜ್ಜಿಯ ಉತ್ತರ ಕ್ರಿಯೆಗಾಗಿ ಫೆ.13ರಂದು ಬಂದಿದ್ದರು. ಅಜ್ಜಿಗೆ ಪ್ರಿಯವಾಗಿದ್ದ ಖಾದ್ಯ ತಯಾರಿಸಲು ಶನಿವಾರ ಸಂಜೆ ಬೆಳ್ತಂಗಡಿಯ ಸೋಮವತಿ ನದಿಯಲ್ಲಿ ಆಮೆಗಳನ್ನು ಬೇಟೆಯಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬೆಳ್ತಂಗಡಿ ಪಿಎಸ್‌ಐ ಆನಂದ್ ಎಂ. ನೇತೃತ್ವದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಪ್ರಕರಣವನ್ನು ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

0 Comments