ಪೈವಳಿಕೆ: "ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧಿಸಿದ ಹೊಸತನವನ್ನು ಹಾಗೂ ತಮ್ಮಲ್ಲಿರುವ ಪ್ರತಿಭೆಯನ್ನು ಮುಕ್ತವಾಗಿ ಅಭಿವ್ಯಕ್ತಿಪಡಿಸಲು 'ಕಲಿಕೋತ್ಸವ' ಒಂದು ಅತ್ಯುತ್ತಮ ವೇದಿಕೆಯಾಗಿದೆ. ಊರವರು ಮತ್ತು ಹೆತ್ತವರು ಇದನ್ನು ಗಮನಿಸಿದಾಗ ಮಗುವಿನ ಬೆಳವಣಿಗೆಗೆ ಹೆಚ್ಚಿನ ಪ್ರೇರಣೆ ಸಿಗುತ್ತದೆ" ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಅವರು ತಿಳಿಸಿದರು.
ಪೈವಳಿಕೆ ಕಾಯರ್ ಕಟ್ಟೆ ಜಿ.ಎಚ್.ಎಸ್.ಎಸ್ ಶಾಲೆಯ ಸೆಮಿನಾರ್ ಹಾಲ್‌ನಲ್ಲಿ ನಡೆದ 'ಕಲಿಕೋತ್ಸವ 2025-26' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪಠ್ಯದ ಓದಿಗಿಂತ ಸೃಜನಶೀಲತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಾಮರ್ಥ್ಯವಿರುವ ವಿದ್ಯಾರ್ಥಿಗಳಿಗೆ ಮಿಂಚಲು ಅಪಾರ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು" ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಇಬ್ರಾಹಿಂ ಬಿ ಅವರು ಮಾತನಾಡಿ, "ಕುತೂಹಲ ಮತ್ತು ಹೊಸ ಆಲೋಚನೆಗಳು ಮಕ್ಕಳ ಮನಸ್ಸನ್ನು ಸದಾ ಹೊಸತನದತ್ತ ಪ್ರೇರೇಪಿಸುತ್ತವೆ. ಮಕ್ಕಳಲ್ಲಿ ಅಂತರ್ಗತವಾಗಿರುವ ಪ್ರತಿಭೆಯು ನಿರಂತರ ಪ್ರಯತ್ನ ಮತ್ತು ಇತರರ ಪ್ರೇರಣೆಯಿಂದ ಮಾತ್ರ ಬೆಳಕನ್ನು ಕಾಣಲು ಸಾಧ್ಯ. ಶಾಲೆಯ ಮತ್ತು ಕಲಿಕೆಯ ಹಿರಿಮೆಗೆ ಮೆರಗನ್ನು ನೀಡುವ ಕಲಿಕೋತ್ಸವವು ಮಕ್ಕಳಿಗೆ ಹೊಸ ಅನುಭವವನ್ನು ನೀಡುತ್ತದೆ" ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಆದಂ ಬಳ್ಳೂರು ವಹಿಸಿದ್ದರು. ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ಯಶೋದಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡೊಮಿನಿಕ್ ಆಗಸ್ಟಿನ್, ಕಾಯರ್ ಕಟ್ಟೆ ಜಿ.ಎಲ್.ಪಿ.ಎಸ್ ಮುಖ್ಯೋಪಾಧ್ಯಾಯರಾದ ಶಿವರಾಮ ಭಟ್, ಎಂ.ಪಿ.ಟಿ.ಎ ಅಧ್ಯಕ್ಷೆ ಸುಮಿತ್ರಾ, ಪಿ.ಟಿ.ಎ ಉಪಾಧ್ಯಕ್ಷ ಖಲೀಲ್ ಚಿಪ್ಪಾರ್, ಸಿದ್ದೀಕ್ ಉಸ್ತಾದ್ ಹಾಗೂ ಎಸ್.ಎಂ.ಸಿ ಅಧ್ಯಕ್ಷ ರಜಾಕ್ ಪೆರುವೋಡಿ ಉಪಸ್ಥಿತರಿದ್ದರು. ಹಿರಿಯ ಸಹಾಯಕ ಶಿಕ್ಷಕ ಹರೀಶ್ ಕುಮಾರ್ ಬಿ. ವಂದಿಸಿದರು. ಅಶ್ರಫ್ ಮರ್ತ್ಯ ಕಾರ್ಯಕ್ರಮ ನಿರೂಪಿಸಿದರು.
.jpeg)
.jpeg)
0 Comments