Ticker

6/recent/ticker-posts

Ad Code

ಸಾಂತ್ವನ ಚಿಕಿತ್ಸೆಗೆ ಅತೀ ಹೆಚ್ಚು ಅನುದಾನದ ಜತೆಗೆ ವಸತಿ ರಹಿತ ಮುಕ್ತ ಪಂಚಾಯತ್ ಯೋಜನೆ : ಎಣ್ಮಕಜೆ ಪಂ.ನಲ್ಲಿ ಸರ್ವ ಸ್ತರಗಳ ಪ್ರಗತಿಯ ಬಜೆಟ್ ಮಂಡನೆ

 

ಪೆರ್ಲ: ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಯಾಲಿಯೇಟಿವ್ ಕೇರ್ (ಸಾಂತ್ವನ ಚಿಕಿತ್ಸೆ) ವಿಭಾಗಕ್ಕೆ ಅತಿ ಹೆಚ್ಚು ಅನುದಾನದೊಂದಿಗೆ ವಸತಿ, ಕುಡಿಯುವ ನೀರು, ಕೃಷಿ, ರಸ್ತೆ ಸಹಿತ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಣ್ಮಕಜೆ ಗ್ರಾಮ ಪಂಚಾಯತು ಬಜೆಟ್ ಮಂಡಿಸಲಾಯಿತು. ಗ್ರಾಮ ಪಂಚಾಯತು ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ವಳಮುಗೇರ್  ಅವರು  ಮಂಡಿಸಿದ ಬಜೆಟ್ ನಲ್ಲಿ  ಇದು ಎಣ್ಮಕಜೆ ಗ್ರಾಮ ಪಂಚಾಯತಿನ ಮಟ್ಟಿಗೆ ಹೊಸ ಮೈಲುಗಲ್ಲಾಗಲಿದೆ. ಕ್ಯಾನ್ಸರ್ ರೋಗಿಗಳ ಉಚಿತ ಪ್ರಯಾಣ ಸೌಲಭ್ಯಕ್ಕಾಗಿ ವ್ಯವಸ್ಥೆಯನ್ನು ಕಲ್ಪಿಸುವ 'ಅತಿ ಜೀವನ' ಪದ್ಧತಿಯ  ಮುಂದುವರಿಕೆ, ಮಹಿಳಾ ಸಬಲೀಕರಣದಲ್ಲಿ ವಿಶೇಷವಾಗಿ ವಿಧವೆಯರಾದ ಮಹಿಳೆಯರ ಮನೆಗಳ ದುರಸ್ತಿಗಾಗಿ  ಗರಿಷ್ಠ ಅನುದಾನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಸತಿ ಯೋಜನೆಗಳಿಗೆ ಪಂಚಾಯತ್‌ನಿಂದಲೂ ಹೆಚ್ಚಿನ ಪಾಲು, ಹಳೆಯ ಮನೆಗಳ ದುರಸ್ತಿಗೂ ಈ ಬಾರಿ ಹೆಚ್ಚಿನ ಪ್ರಾಮುಖ್ಯತೆ ಅಂಗನವಾಡಿಗಳಿಗೆ ಆಧುನಿಕ ಸ್ಪರ್ಶ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಹಾಗೂ ವಿಭಿನ್ನ ಸಾಮರ್ಥ್ಯದ (ವಿಶೇಷ ಚೇತನ) ವಿದ್ಯಾರ್ಥಿಗಳ ಕ್ಷೇಮಕ್ಕಾಗಿ ವಿಶೇಷ ಆದ್ಯತೆ ಹಿರಿಯ ನಾಗರಿಕರ ನೆಮ್ಮದಿಗಾಗಿ 'ಹಗಲು ಮನೆ' ಯೋಜನೆಯ ಪರಿಣಾಮಕಾರಿಯಾಗಿ ಜಾರಿ, ಯುವಜನರ ಕ್ಷೇಮ, ಕ್ರೀಡೆ, ಕೃಷಿ ಉತ್ತೇಜನ, ಪರಿಸರ ಸಂರಕ್ಷಣೆ, ಶುಚಿತ್ವ ಮತ್ತು ಪೋಷಕಾಂಶಗಳ ವಿತರಣೆ ಎಂಬಿವು ಬಜೆಟ್ ನ ಪ್ರಮುಖ ಅಂಶಗಳಾಗಿವೆ.

ಪಾಲಿಯೇಟಿವ್ ಕೇರ್ 10 ಲಕ್ಷ, ಪಾಲಿಯೇಟಿವ್ ಉಪಕರಣಗಳ ಖರೀದಿ 5 ಲಕ್ಷ, ಅತಿಜೀವನಂ (ಕ್ಯಾನ್ಸರ್ ರೋಗಿಗಳಿಗೆ ಪ್ರಯಾಣ ಸೌಲಭ್ಯ) 5 ಲಕ್ಷ, ಅಂಗಾಂಗ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳಿಗೆ ಔಷಧಿ ಖರೀದಿ 2 ಲಕ್ಷ, ಡಯಾಲಿಸಿಸ್, ಕ್ಷಯರೋಗಿಗಳಿಗೆ ಕಿಟ್ ವಿತರಣೆ, ಹೋಮಿಯೋ ಡಿಸ್ಪೆನ್ಸರಿ ಮತ್ತು ಆಯುರ್ವೇದ ಡಿಸ್ಪೆನ್ಸರಿಗಳಿಗೆ ಅಗತ್ಯವಾದ ಔಷಧಿಗಳ ಖರೀದಿ ಮುಂತಾದ ಯೋಜನೆಗಳಿಗಾಗಿ 57,95,000/- ರೂಪಾಯಿಗಳನ್ನು ಕಾಯ್ದಿರಿಸಿದ ವಿವಿಧ  ಯೋಜನೆಗಳ ಸಮಗ್ರ ಬಜೆಟ್ ಮಂಡಿಸಲಾಯಿತು. ಮಹಿಳೆಯರ ಕಲಾತ್ಮಕ ಪ್ರತಿಭೆಯನ್ನು ಪ್ರೋತ್ಸಾಹಿಸಲು 'ವನಿತೋತ್ಸವ' ಆಯೋಜಿಸುವ ಯೋಜನೆ ಮತ್ತು ವಿಧವೆಯರ ಮನೆ ನವೀಕರಣಕ್ಕಾಗಿ 49 ಲಕ್ಷ ರೂಪಾಯಿಗಳನ್ನು ಈ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ. ಶಿಕ್ಷಣ ಕ್ಷೇತ್ರದ ಮೂಲಭೂತ ಭೌತಿಕ ಸೌಲಭ್ಯಗಳನ್ನು ಸುಧಾರಿಸಲು, ಸರ್ಕಾರಿ ಎಲ್‌.ಪಿ ಶಾಲೆಗಳಿಗೆ ಲ್ಯಾಪ್‌ಟಾಪ್ ಮತ್ತು ಪ್ರೊಜೆಕ್ಟರ್ ಖರೀದಿಸಲು ಸೇರಿದಂತೆ 17,65,000 ರೂಪಾಯಿಗಳನ್ನು ಮೀಸಲಿಡಲಾಗಿದೆ. ಪಂಚಾಯತ್‌ನ ಅಂಗನವಾಡಿಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು, ಅಂಗನವಾಡಿ ನವೀಕರಣಕ್ಕಾಗಿ 35,35,400 ಮತ್ತು ಅಂಗನವಾಡಿಗಳಿಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು 2,00,000 ಸೇರಿದಂತೆ ಒಟ್ಟು 85,49,700/-ರೂಪಾಯಿಗಳನ್ನು ಮೀಸಲಿಡಲಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು  ಪಂಚಾಯತ್ ತರುತ್ತಿದೆ ಎಂದು ಅಬೂಬಕ್ಕರ್ ಸಿದ್ದೀಕ್ ವಳಮುಗೇರ್ ತಿಳಿಸಿದರು. 

ಗ್ರಾಮ ಪಂಚಾಯತು ಅಧ್ಯಕ್ಷೆ  ಕುಸುಮಾವತಿ ಬಿ. ಅಧ್ಯಕ್ಷತೆ ವಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಧಾಕೃಷ್ಣ ನಾಯಕ್ ಶೇಣಿ , ರಮ್ಲ ಇಬ್ರಾಹಿಂ, ವಿಜಯ ಕೆ, ಸಹಾಯಕ ಕಾರ್ಯದರ್ಶಿ ಗಿರೀಶ್, ವಿವಿಧ ವಾರ್ಡ್ ಸದಸ್ಯರು, ವರ್ಕಿಂಗ್ ಗ್ರೂಪ್ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments