Ticker

6/recent/ticker-posts

Ad Code

ಪುತ್ತಿಗೆ ಜಿ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿಯ ನವ ಪರ್ವ: ಜಿ.ಪಂ.ಸದಸ್ಯ ಸೋಮಶೇಖರ್ ಜೆ.ಎಸ್. ಪ್ರಸ್ತಾವನೆಯಿಂದ ವಿವಿಧ ಯೋಜನೆಗಳಿಗೆ ಅನುದಾನ

 

ಪುತ್ತಿಗೆ : ​ಕಾಸರಗೋಡು ಜಿಲ್ಲಾ ಪಂಚಾಯತ್‌ನ ಪುತ್ತಿಗೆ ಡಿವಿಷನ್ ವ್ಯಾಪ್ತಿಯಲ್ಲಿ ದೀರ್ಘಕಾಲದ ಮೂಲಸೌಕರ್ಯ ಬೇಡಿಕೆಗಳಿಗೆ ಈ ಬಾರಿಯ 2026-27ರ ಆರ್ಥಿಕ ಯೋಜನೆಯಲ್ಲಿ ಡಿಪಿಸಿ ಅಂಗೀಕಾರ ಲಭ್ಯವಾಗುವ ಮೂಲಕ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಜೆ.ಎಸ್. ಅವರ ನಿರಂತರ ಪ್ರಸ್ತಾವನೆ ಮತ್ತು ಒತ್ತಡದ ಫಲವಾಗಿ ಈ ಭಾಗದ ಪ್ರಮುಖ ಯೋಜನೆಗಳಿಗೆ ಹೆಚ್ಚು ಮೊತ್ತದ ಹಣ ನಿಗದಿಯಾಗಿದೆ. ವಿಶೇಷವಾಗಿ, ಹಳೆಯದಾದ ಮತ್ತು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಾಡೂರು-ತಲಮುಗರು ತೂಗು ಸೇತುವೆಯ ಪುನಶ್ಚೇತನಕ್ಕೆ 30 ಲಕ್ಷ ರೂಪಾಯಿಗಳ ಅನುದಾನ ಮೀಸಲಿಡಲಾಗಿದೆ. ನಿತ್ಯವೂ ಜೀವದ ಹಂಗು ತೊರೆದು ಸಂಚರಿಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಕೃಷಿಕರ ಹಿತದೃಷ್ಟಿಯಿಂದ ಈ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ.

​ಇದರೊಂದಿಗೆ, ಶಿಕ್ಷಣ ಮತ್ತು ಗ್ರಾಮೀಣ ಸಂಪರ್ಕಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ಜಿ.ಎಚ್.ಎಸ್. ಸೂರಂಬೈಲು ಶಾಲೆಯ  ಕಟ್ಟಡ ನವೀಕರಣಕ್ಕೆ 15 ಲಕ್ಷ ರೂಪಾಯಿ ಹಾಗೂ ಪೆಲ್ತಡ್ಕ- ಪೆರ್ವೋಡಿ ಜಿಲ್ಲಾ ಪಂಚಾಯತ್ ರಸ್ತೆಯ ಅಭಿವೃದ್ಧಿಗೆ 25 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸೋಮಶೇಖರ್ ಜೆ.ಎಸ್, "ಪುತ್ತಿಗೆ ಡಿವಿಷನ್‌ನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಪ್ರಮುಖ ಗುರಿಯಾಗಿದ್ದು, ಸೀಮಿತ ಅನುದಾನದ ನಡುವೆಯೂ ಜನರ ದೀರ್ಘಕಾಲದ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

​ಈ ಎಲ್ಲಾ ಯೋಜನೆಗಳ ನಡುವೆ, ಈ ಭಾಗದ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಕನ್ಯಪ್ಪಾಡಿ-ಮುಂಡಿತ್ತಡ್ಕ ರಸ್ತೆಯ ಸಮಗ್ರ ಅಭಿವೃದ್ಧಿಗಾಗಿ 50 ಲಕ್ಷ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ಮೀಸಲಿಟ್ಟಿರುವುದು ಸ್ಥಳೀಯ ನಿವಾಸಿಗಳಲ್ಲಿ ದೊಡ್ಡ ಸಮಾಧಾನ ತಂದಿದೆ. ಬದಿಯಡ್ಕ, ಪುತ್ತಿಗೆ, ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅತೀ ಹೆಚ್ಚು ವಾಹನ ಸಂಚಾರ ಮತ್ತು ಸಾರ್ವಜನಿಕ ಅವಲಂಬನೆ ಹೊಂದಿರುವ ಈ ರಸ್ತೆಯು ದಶಕಗಳಿಂದ ಹದಗೆಟ್ಟು ಹೋಗಿದ್ದು, ಇದರ ದುರಸ್ತಿಗಾಗಿ ಅನೇಕ ಹೋರಾಟಗಳು ನಡೆದಿದ್ದವು. ಇದೀಗ  ಈ ಆರ್ಥಿಕ ವರ್ಷದಲ್ಲಿ ರಸ್ತೆಗೆ ದೊಡ್ಡ ಮೊತ್ತದ ಹಣ ನಿಗದಿಯಾಗಿರುವುದು ಈ ಭಾಗದ ಜನರ ದಶಕಗಳ ನೋವಿಗೆ ಸ್ಪಂದಿಸಿದಂತಾಗಿದೆ.

Post a Comment

0 Comments