Ticker

6/recent/ticker-posts

Ad Code

ಗೂಗಲ್ ಮ್ಯಾಪ್ ಬಳಸಿ ಜನವಸತಿ ಕಡಿಮೆ ಇರುವ ದೇವಸ್ಥಾನಗಳನ್ನು ಗುರುತಿಸಿ ಕಳ್ಳತನ ನಡೆಸುತ್ತಿದ್ದ ಕಳ್ಳರ ಬಂಧನ

 

ಗುಜರಾತ್ : ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೇವಸ್ಥಾನಗಳಲ್ಲಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಗೂಗಲ್ ಮ್ಯಾಪ್ ಮೂಲಕ ಜನವಸತಿ ಕಡಿಮೆ ಇರುವ ದೇವಸ್ಥಾನಗಳನ್ನು ಗುರುತಿಸಿ, ರಾತ್ರಿ ವೇಳೆ ಕಳ್ಳತನ ನಡೆಸುತ್ತಿದ್ದ ಇಬ್ಬರಿಂದ ಸುಮಾರು 10 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಗೇಡಿಯ ಪಂಚಭಾಯ್ ಕೋಲಿ ಮತ್ತು ಉಮೈಯಾದ ಜಾವೇದ್ ಘಾಂಚಿ ಎಂದು ಗುರುತಿಸಲಾಗಿದೆ. ಇವರಲ್ಲಿ ಜಾವೇದ್ ಘಾಂಚಿ ಮೊಬೈಲ್ ತಂತ್ರಜ್ಞಾನ ಬಳಕೆಯಲ್ಲಿ ನಿಪುಣನಾಗಿದ್ದ. ಗೂಗಲ್ ಮ್ಯಾಪ್ ಸಹಾಯದಿಂದ ದೂರದ ಹಾಗೂ ನಿರ್ಜನ ಪ್ರದೇಶಗಳಲ್ಲಿರುವ ದೇವಸ್ಥಾನಗಳನ್ನು ಪತ್ತೆಹಚ್ಚಿ, ನಂತರ ರಾತ್ರಿ ವೇಳೆ ಸ್ಥಳಕ್ಕೆ ನಡೆದುಕೊಂಡೇ ಹೋಗಿ ಕಳ್ಳತನ ನಡೆಸುತ್ತಿದ್ದರು.

ದೇವಸ್ಥಾನಗಳ ಬೀಗಗಳನ್ನು ತೆಂಗಿನಕಾಯಿ ಕತ್ತರಿಸಲು ಬಳಸುವ ಹರಿತವಾದ ಕಬ್ಬಿಣದ ಉಪಕರಣದಿಂದ ಮುರಿದು ಒಳನುಗ್ಗಿ, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಮೋತಿ ಹಮೀರ್‌ಪರ್ ಗ್ರಾಮದ ಖೋಡಿಯಾರ್ ಮಾತಾ ಹಾಗೂ ರಾಮಾಪಿರ್ ದೇವಸ್ಥಾನಗಳಲ್ಲಿ 1,10,150 ಲಕ್ಷ ರೂ ಮೌಲ್ಯದ ಆಭರಣ ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ತನಿಖೆ ನಡೆಸಿ ಆರೋಪಿಗಳ ಚಲನವಲನಗಳನ್ನು ಪತ್ತೆಹಚ್ಚಿದರು.

ಕದ್ದ ವಸ್ತುಗಳನ್ನು ಮಾರಾಟ ಮಾಡಲು ರಾಧನ್‌ಪುರಕ್ಕೆ ತೆರಳುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆ ವೇಳೆ ಸೆಲಾರಿ ದೇವಸ್ಥಾನ ಸೇರಿ ಹಲವು ಕಡೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಆರೋಪಿಗಳಿಂದ 14 ಬೆಳ್ಳಿಯ ಛತ್ರಿಗಳು, ಬೆಳ್ಳಿಯ ನಾಗರಹಾವಿನ ವಿಗ್ರಹಗಳು, ಮೊಬೈಲ್ ಫೋನ್‌ಗಳು ಹಾಗೂ ₹2,28,160 ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ ಸುಮಾರು 10 ಲಕ್ಷರೂ. ಎಂದು ಅಂದಾಜಿಸಲಾಗಿದೆ. ಸದ್ಯ ಜಾವೇದ್ ಘಾಂಚಿ ವಿರುದ್ಧ ಮೂರು ಹಾಗೂ ಪಂಚಭಾಯ್ ಕೋಲಿ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. 

Post a Comment

0 Comments