ಬದಿಯಡ್ಕ : ಬಿಸಲಿನ ಝಳವನ್ನೂ ಲೆಕ್ಕಿಸದೆ ಸಹಸ್ರಾರು ಮಂದಿ ಭಗವದ್ಭಕ್ತರ ಶ್ರದ್ಧಾಭಕ್ತಿಯ ಪಾಲ್ಗೊಳ್ಳುವಿಕೆಯೊಂದಿಗೆ ಅದ್ಧೂರಿಯ ಮೆರವಣಿಗೆಯ ಮೂಲಕ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹಸಿರುವಾಣಿ ಮೆರವಣಿಗೆ ಶುಕ್ರವಾರ ಜರಗಿತು. ಪ್ರಾತಃಕಾಲ ಶ್ರೀಕ್ಷೇತ್ರದಲ್ಲಿ ಗಣಪತಿ ಹೋಮ, ಉಗ್ರಾಣ ಮುಹೂರ್ತ ನಡೆಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ಟ ಆನೆಮಜಲು ದೀಪಬೆಳಗಿಸಿದರು.
ಕೆಡೆಂಜಿ ದೇವಸ್ಥಾನದಿಂದ ಹಸಿರುವಾಣಿ ಮೆರವಣಿಗೆ :
ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಭಗವದ್ಭಕ್ತರು ಒಟ್ಟುಗೂಡಿ ಪ್ರಾರ್ಥನೆಯನ್ನು ಸಲ್ಲಿಸಿ ಹಸಿರುವಾಣಿ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಭಗವದ್ಭಕ್ತರು ಅಕ್ಕಿಮುಡಿಯನ್ನು ತಲೆಗೇರಿಸಿದರು. ನೂರಾರು ಬುಟ್ಟಿಗಳಲ್ಲಿ ತರಕಾರಿಗಳನ್ನು ಹೊತ್ತ ಮಾತೆಯರು, ಮುತ್ತಕೊಡೆಗಳು, ಚೆಂಡೆಮೇಳ, ವಾದ್ಯ, ಕೋಲಾಟ, ಗೊಂಬೆಗಳ ನರ್ತನದೊಂದಿಗೆ ಸಾಗಿಬಂದ ಮೆರವಣಿಗೆ ಬದಿಯಡ್ಕ ಪೇಟೆಯನ್ನು ಸುತ್ತಿ ವರದಾ ನದಿಯನ್ನು ದಾಟಿ ಪೆರಡಾಲ ದೇವಸ್ಥಾನಕ್ಕೆ ತಲುಪಿತು. ಬಿಸಿಲನ್ನೂ ಲೆಕ್ಕಿಸದೆ ಮಾತೆಯರು, ಮಕ್ಕಳು ಕುಣಿತ ಭಜನೆಯೊಂದಿಗೆ ಜೊತೆಗೂಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ, ಕೃಷ್ಣರಾಜ ಬಲ್ಲಾಳ್ ಕೊಡ್ಯಮ್ಮೆ ಅರಮನೆ, ಹಸಿರುವಾಣಿ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಸಂಚಾಲಕ ಶ್ಯಾಮಪ್ರಸಾದ ಮಾನ್ಯ, ಸದಾಶಿವ ಮುರಿಯಂಕೂಡ್ಲು, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಮೊಕ್ತೇಸರರಾದ ಕೃಷ್ಣ ಬಿ., ಸೀತಾರಾಮ ವಿ., ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಉದ್ಯಮಿ ಮಧುಸೂದನ ಆಯರ್ ಮಂಗಳೂರು, ಗಣೇಶ ಪ್ರಸಾದ ಕಡಪ್ಪು, ಭಾಸ್ಕರ ಪಂಜಿತ್ತಡ್ಕ, ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಡಿ.ಶಂಕರ, ವಿವಿಧ ಜನಪ್ರತಿನಿಧಿಗಳು, ವಿವಿಧ ದೇವಸ್ಥಾನದ ಪ್ರತಿನಿಧಿಗಳು, ನಾಡಿನ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪೆರಡಾಲದ ಬೇತಾಳ :
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಶ್ರೀದೇವರ ಬಲಿಯೊಂದಿಗೆ `ಬೇತಾಳ' ಸುತ್ತುಬರುವುದು ವಿಶೇಷ ಆಕರ್ಷಣೆಯಾಗಿದೆ. ಶ್ರೀ ಉದನೇಶ್ವರ ದೇವರ ಬ್ರಹ್ಮಕಲಶೋತ್ಸವದ ಸಂದರ್ಭ ಹಸಿರುವಾಣಿ ಮೆರವಣಿಗೆಯಲ್ಲೂ ಸಾಗಿಬಂದ `ಬೇತಾಳ' ವಿಶೇಷ ಆಕರ್ಷಣೆಯಾಯಿತು.

0 Comments