ಕಾಸರಗೋಡು: ಚುನಾವಣಾ ಪ್ರಣಾಳಿಕೆಯಲ್ಲಿ ಯುಡಿಎಫ್ ಮುಂದಿರಿಸಿದ ಇಂದಿರಾ ಗ್ಯಾರಂಟಿ ಯೋಜನೆಯಂತೆ ಮೇ 15ರಿಂದ ಕೆಎಸ್ಸಾರ್ಟೀಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸದೆ, ಯುಡಿಎಫ್ ಮಹಿಳೆಯರ ಮತ ಪಡೆದು ವಂಚನೆ ನಡೆಸಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಆರೋಪಿಸಿದರು. ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾಸರಗೋಡು ಕೆಎಸ್ಸಾರ್ಟೀಸಿ ಬಸ್ ನಿಲ್ದಾಣಕ್ಕೆ ನಡೆದ ಉಚಿತ ಬಸ್ ಪ್ರಯಾಣ ವಿಳಂಬವನ್ನು ಪ್ರತಿಭಟಿಸಿ ನಡೆದ ಪ್ರತಿಭಟನಾ ಮಾರ್ಚ್ ಮತ್ತು ಟಿಕೆಟ್ ರಹಿತ ಪ್ರಯಾಣ ಪ್ರತಿಭಟನೆ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಜತೆ ಚುನಾವಣೆ ನಡೆದ ಇತರ ನಾಲ್ಕು ರಾಜ್ಯಗಳಲ್ಲಿ ಸರಕಾರ ರಚನೆಯಾಗಿ ಸಂಪುಟ ಸಭೆಯೊಂದಿಗೆ ಆಡಳಿತಕ್ಕೆ ಚಾಲನೆಯಾಗಿದೆ. ಪ. ಬಂಗಾಳದಲ್ಲಿ ಸುವೇಂದು ಅಧಿಕಾರಿ ಅವರು ಜೂನ್ ತಿಂಗಳಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿದ್ದಾರೆ. ಇದೇ ವೇಳೆ ಕೇರಳದಲ್ಲಿ ಮುಖ್ಯಮಂತ್ರಿ ಘೋಷಣೆಯೊಂದಿಗೆ ಸ್ಥಾನಮಾನಕ್ಕಿರುವ ಚರ್ಚೆಗಳಷ್ಟೆ ನಡೆಯುತ್ತಿದೆ. ವಿ. ಡಿ. ಸತೀಶನ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲು ವಿಳಂಬವಾಗುವುದಕ್ಕೆ ಕಾರಣ ಈ ನಾಡಿನ ಜನರಲ್ಲ. ಅದು ಜನರ ಅಪರಾಧವೂ ಅಲ್ಲ. ಅದು ಯುಡಿಎಫ್ ನ ಅಧಿಕಾರ ಹಂಚಿಕೆಯ ತರ್ಕದ ಫಲ. ಇದರಿಂದಾಗಿ ಸಚಿವ ಸಂಪುಟ ರಚನೆ ವಿಳಂಬವಾಗಲು ಸಾಧ್ಯತೆ ಇದೆ ಎಂದು ಎಂ. ಎಲ್. ಅಶ್ವಿನಿ ಆರೋಪಿಸಿದರು.
ಇಂದಿರಾ ಗ್ಯಾರಂಟಿ ಎಂಬ ಹೆಸರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸಹಿತ ಪಂಚ ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದ ಯುಡಿಎಫ್ ಅದನ್ನು ಜ್ಯಾರಿಗೊಳಿಸಲು ವಿಫಲವಾದರೆ ಬಿಜೆಪಿ ಕಡೆಯಿಂದ ಯುಡಿಎಫ್ ಪ್ರಬಲ ಪ್ರತಿಭಟನೆ ಎದುರಿಸಬೇಕಾದೀತೆಂದು ಅವರು ಮುನ್ನೆಚ್ಚರಿಕೆ ನೀಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಪುಷ್ಪಾಗೋಪಾಲ್, ಮಹಿಳಾ ಮೋರ್ಛಾ ಜಿಲ್ಲಾಧ್ಯಕ್ಷೆ ಕೆ. ಎಸ್. ರಮಣಿ, ಜಿಲ್ಲಾ ಪ್ರ. ಕಾರ್ಯದರ್ಶಿ ಅನಿತಾ ನಾಯ್ಕ್, ಮಧೂರು ಗ್ರಾ. ಪಂ. ಅಧ್ಯಕ್ಷೆ ಸುಜ್ಞಾನಿ ಶಾನುಭಾಗ್, ಕಾರಡ್ಕ ಗ್ರಾ. ಪಂ. ಅಧ್ಯಕ್ಷೆ ಎಂ. ಜನನಿ, ಕುಂಬ್ಡಾಜೆ ಪಂ. ಅಧ್ಯಕ್ಷೆ ಯಶೋಧ ಎನ್ ಸಹಿತ ಪ್ರಮುಖರು ನೇತೃತ್ವ ನೀಡಿದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

0 Comments