ಬದಿಯಡ್ಕ: ಚೆರ್ಕಳ-ಕಲ್ಲಡ್ಕ ಅಂತರ ರಾಜ್ಯ ಸಂಪರ್ಕ ರಸ್ತೆಯ ಪಳ್ಳತ್ತಡ್ಕದಲ್ಲಿ ಬೇಸಿಗೆಯ ಮಳೆಯಿಂದಾಗಿ ರಸ್ತೆಯ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಪ್ರಯಾಣ ಸಂಕಷ್ಟ ಎದುರಾಗಿದೆ. ಅಭಿವೃದ್ಧಿಯು ಮರೀಚಿಕೆಯಾಗಿರುವ ಇಲ್ಲಿ ನಿನ್ನೆ ಸಂಜೆ ಬಿದ್ದ ಬೇಸಿಗೆ ಮಳೆಗೆ ರಸ್ತೆಯ ಗುಂಡಿಗಳು ನೀರಿನಿಂದ ತುಂಬಿವೆ. ಇದರಿಂದಾಗಿ ಪ್ರಯಾಣ ದುಸ್ತರವಾಗಿದೆ. ವರ್ಷಗಳಿಂದ ಶಿಥಿಲಗೊಂಡು ದೊಡ್ಡ ದೊಡ್ಡ ಹೊಂಡ ಬಿದ್ದಿರುವ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಪ್ರತಿಭಟನಾ ಸಭೆಗಳನ್ನು ನಡೆಸಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪ್ರಯಾಣಿಕರು ಮತ್ತು ಸ್ಥಳೀಯರ ನಿರಂತರ ಬೇಡಿಕೆಗಳ ಹೊರತಾಗಿಯೂ, ರಸ್ತೆಯ ಗುಂಡಿಗಳನ್ನು ಮುಚ್ಚಲು 39 ಕೋಟಿ ರೂ.ಗಳನ್ನು ನಿಗದಿಪಡಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಆದರೆ ಯಾವುದೇ ಮುಂದಿನ ಕ್ರಮ ಕೈಗೊಳ್ಳಲಾಗಿಲ್ಲ. ಮಳೆಗಾಲ ಪ್ರಾರಂಭವಾಗುವ ಮೊದಲು ರಸ್ತೆಯ ಗುಂಡಿಗಳನ್ನು ತುಂಬಿ ದುರಸ್ತಿ ಮಾಡದಿದ್ದರೆ, ಈ ಮಾರ್ಗದಲ್ಲಿ ಪ್ರಯಾಣ ಸಂಪೂರ್ಣವಾಗಿ ಅಸ್ತವ್ಯಸ್ತವಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯನ್ನು ಹಿಂದಿನ ಶಾಸಕ ಎನ್ ಎ ನೆಲ್ಲಿಕುನ್ನು ಅವರ ಮುಂದಿಟ್ಟಾಗ 'ಅಭಿವೃದ್ಧಿ ಕೈಗೊಳ್ಳುವ' ಎಂಬ ಸಬೂಬು ಹೇಳಿ ನುಣುಚಿಕೊಂಡಿದ್ದು, ಇದೀಗ ಚುನಾಯಿತರಾಗಿ ಬಂದ ನೂತನ ಶಾಸಕ ಹಾಗೂ ಸರಕಾರದ ಮೇಲೆ ಭರವಸೆ ಇರಿಸಲಾಗಿದ್ದು ಕಾದು ನೋಡುವಂತಾಗಿದೆ.

0 Comments