ಮುಂಬೈ: ಮಹಾರಾಷ್ಟ್ರದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿದಿದೆ. ಕೆಜಿಗೆ 1 ರಿಂದ 4 ರೂ.ಗಳವರೆಗೆ ಕುಸಿತ ಕಂಡಿದ್ದು ಇದು ರೈತರಿಗೆ ದೊಡ್ಡ ಹಿನ್ನಡೆಯಾಗಿದೆ. ಕೃಷಿಗೆ ಖರ್ಚು ಮಾಡಿದ ಹಣವನ್ನು ಕನಿಷ್ಠ ಪಕ್ಷ ಮರಳಿ ಪಡೆಯುವ ಆಶಯದೊಂದಿಗೆ ಮಾರುಕಟ್ಟೆಗೆ ಬಂದ ಈರುಳ್ಳಿ ಕೃಷಿಕರು ಪ್ರತಿ ಕೆಜಿಗೆ ಕೇವಲ 50 ಪೈಸೆ ಮಾತ್ರ ಪಡೆದರು. ಸಾಮಾನ್ಯ 1 ಲಕ್ಷ ರೂ.ಗಳಿಗಿಂತ ಹೆಚ್ಚು ವೆಚ್ಚ ಮಾಡಿ ಬೆಳೆದ ಬೆಳೆಗೆ ಅಲ್ಪ ಮೊತ್ತ ಲಭಿಸುವ ಕಾರಣ ಕೃಷಿಗಾಗಿ ಸ್ಥಳೀಯ ಸಾಲದಾತರಿಂದ ಸಾಲ ಪಡೆದು ಮರಳಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಈರುಳ್ಳಿ ಕೃಷಿಕ ಜಿತೇಂದ್ರ ಅಸಹಾಯಕರಾಗಿರುವುದಾಗಿ ದೂರಿದ್ದಾರೆ. ಇತರ ರೈತರ ಪರಿಸ್ಥಿತಿಯೂ ಇದೇ ರೀತಿ ಇದೆ. ಒಂದು ಕ್ವಿಂಟಲ್ ಈರುಳ್ಳಿ ಉತ್ಪಾದಿಸಲು ಸುಮಾರು 1,800 ರೂ. ವೆಚ್ಚವಾಗುತ್ತಿರುವಾಗ ಭಾರಿ ನಷ್ಟದಲ್ಲಿ ಈ ಮಾರಾಟ ನಡೆಯುತ್ತಿದೆ. ಇದು ರೈತರನ್ನು ಸಾಲ ಮತ್ತು ದುಃಖಕ್ಕೆ ತಳ್ಳುತ್ತಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ರಫ್ತಿನ ಮೇಲೆ ಪರಿಣಾಮ ಬೀರಿದೆ ಮತ್ತು ಹೆಚ್ಚಿನ ಈರುಳ್ಳಿ ಸ್ಥಳೀಯ ಮಾರುಕಟ್ಟೆಯನ್ನು ತಲುಪಿದೆ, ಇದು ಭಾರಿ ಕುಸಿತಕ್ಕೆ ಕಾರಣವಾಗಿದೆ. ಪೈಥಾನ್ ತಾಲ್ಲೂಕಿನ ವರುಡಿ ಗ್ರಾಮದ 45 ವರ್ಷದ ರೈತ ಪ್ರಕಾಶ್ ಗಲಧರ್ ಕೂಡ ತಮ್ಮ ದುಃಸ್ಥಿತಿಯನ್ನು ಬಹಿರಂಗಪಡಿಸಿದರು. ಅವರು 25 ಚೀಲ ಈರುಳ್ಳಿಯೊಂದಿಗೆ (ಒಟ್ಟು 1,262 ಕೆಜಿ) ಪೈಥಾನ್ ಎಪಿಎಂಸಿಗೆ ತಲುಪಿದರು. ಹರಾಜು ಮುಗಿದಾಗ, ಅವರಿಗೆ ಒಟ್ಟು 1,262 ರೂ. ಸಿಕ್ಕಿತು. ಅಂದರೆ, ಅವರು ಪ್ರತಿ ಕೆಜಿಗೆ ಕೇವಲ 1 ರೂ. ಪಡೆದರು. ಈ ಮೊತ್ತವು ಸಾರಿಗೆ ಸೇರಿದಂತೆ ಇತರ ವೆಚ್ಚಗಳನ್ನು ಸಹ ಭರಿಸಬೇಕು. ಇದು ಇನ್ನಷ್ಟು ಬಿಕ್ಕಟ್ಟಿಗೆ ಕಾರಣವಾಗುತ್ತದೆ.

0 Comments