Ticker

6/recent/ticker-posts

Ad Code

ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾ ಸ್ವಾಮೀಜಿ ಭೇಟಿ

ಪೆರ್ಲ : "ದೇವರ ಆರಾಧನೆ ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಾಗಿ ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ. ದೇವರ ಆರಾಧನೆ ನಮ್ಮ ಬಲ ಎಂಬ ನಂಬಿಕೆ ಅತ್ಯಂತ ಶಕ್ತಿಶಾಲಿ ಸೂತ್ರವಾಗಿದೆ" ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾ ಸ್ವಾಮೀಜಿ  ಹೇಳಿದರು. ಪೆರ್ಲ ಸಮೀಪದ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ  ಭೇಟಿ ನೀಡಿದ ಅವರು ದೇವರ ದರ್ಶನ ಪಡೆದು ಫಲ ಪುಷ್ಪ, ಸ್ಮರಣಿಕೆ ಸ್ವೀಕರಿಸಿ ಆಶೀರ್ವಚನ ನೀಡಿದರು‌.

ರಾಜ, ಮಹಾರಾಜರುಗಳ ಚರಿತ್ರೆಯನ್ನು ಅವಲೋಕನ ಮಾಡಿದರೆ, ಅನೇಕ ದೇವಾಲಯಗಳ‌ ಜೀರ್ಣೋದ್ಧಾರ, ಬ್ರಹ್ಮಕಲಶ ಮಾಡಿಸಿದ್ದನ್ನು ತಿಳಿಯಬಹುದು. ಭಕ್ತಿ ಮತ್ತು ಸೇವಾ ಮಾರ್ಗದಿಂದ ಭಗವಂತನ ಅನುಗ್ರಹವನ್ನು ಪಡೆದು, ಅನೇಕ ಪ್ರಭಾವಶಾಲಿಗಳು, ಮಹಾತ್ಮರು ತಮ್ಮ ಆಂತರಿಕ ಶಕ್ತಿ ಮತ್ತು ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ. 'ಭಗವತ್ ಅನುಗ್ರಹದಿಂದ ಮಾತ್ರ ಸಫಲತೆ' ಎಂಬುದು ಭಾರತೀಯ ಸಂಸ್ಕೃತಿ ಮತ್ತು ದರ್ಶನಶಾಸ್ತ್ರದಲ್ಲಿನ ಆಳವಾದ ನಂಬಿಕೆಯಾಗಿದೆ. 'ನಾನೇ ಮಾಡಿದ್ದು' ಎಂಬ ಅಹಂಕಾರವನ್ನು ತೊರೆದು, ಎಲ್ಲವೂ ದೇವರ ಇಚ್ಛೆ ಎಂದು ಭಗವಂತನಿಗೆ ಶರಣಾದಾಗ‌ ಸಫಲತೆ ಮತ್ತು ಶಾಂತಿ ದೊರೆಯುವುದು ಎಂದರು.

ಸಾಹಿತಿ, ಚಿಂತಕ, ಶಿಕ್ಷಣ ತಜ್ಞರು, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ.ವರದರಾಜ ಚಂದ್ರಗಿರಿ ಸ್ವಾಮೀಜಿಗಳನ್ನು ಗೌರವಿಸಿ ಮಾತನಾಡಿ, ನಾವೆಲ್ಲಾ ಶಂಕರಾಚಾರ್ಯ ಪರಂಪರೆಯ ಭಕ್ತರು. ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಅದ್ವೈತ ವೇದಾಂತ ಪೀಠಗಳನ್ನು ಸ್ಥಾಪಿಸಿದ್ದಾರೆ. 1,200 ವರ್ಷ ಇತಿಹಾಸದ ಶೃಂಗೇರಿ ಪೀಠವು ಅದ್ವೈತ ವೇದಾಂತ ತತ್ವವನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವ ಪ್ರಮುಖ ಕೇಂದ್ರವಾಗಿದೆ. ಶೃಂಗೇರಿ ಜಗದ್ಗುರುಗಳು ಶಂಕರಾಚಾರ್ಯರ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ. ಶೃಂಗೇರಿ ಶಾರದಾ ಪೀಠವು ಆಧ್ಯಾತ್ಮಿಕತೆಯ ಜೊತೆಗೆ ಬಲವಾದ ಸಾಮಾಜಿಕ ಬದ್ಧತೆಯನ್ನು ಹೊಂದಿದೆ. ದೇಶ ಕಾಯುವ ಸೈನಿಕರಿಗೆ ಗುರುಪೀಠವು ಅನೇಕ ಸಂದರ್ಭಗಳಲ್ಲಿ ಸಾಂತ್ವನ ನೀಡಿದೆ. ಸೈನಿಕರು ಗಾಯಗೊಂಡಾಗ ತೀವ್ರ ರಕ್ತಸ್ರಾವವನ್ನು ತಡೆಗಟ್ಟಲು ಮತ್ತು ತ್ವರಿತವಾಗಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ತಂತ್ರಜ್ಞಾನದ ಸಂಶೋಧನೆಗೆ ಪೀಠವು 30  ಕೋಟಿ ರೂ. ನೆರವು ನೀಡಿದೆ. ಹಿಂದೂ ದರ್ಮದ ರಕ್ಷಣೆಗಾಗಿ ಕೇರಳದಿಂದ ಕಾಶ್ಮೀರದವರೆಗೆ ಉಪಕ್ರಮಗಳನ್ನು ನೀಡಿದೆ. ಸ್ಪಿರಿಚ್ಯುವಲ್ ಇಂಡಿಯಾ ಪರಿಕಲ್ಪನೆಗೆ ಶೃಂಗೇರಿ ಮಠ ಒತ್ತು ನೀಡಿದೆ ಎಂದರು‌. ನಿವೃತ್ತ ಶಿಕ್ಷಕ ಡಾ.ಸತೀಶ್ ಪುಣಿಂಚಿತ್ತಾಯ ಸ್ವಾಗತಿಸಿ, ಸುರೇಶ್ ನೆಲ್ಲಿಕುಂಜೆ ನಿರೂಪಿಸಿದರು‌.

Post a Comment

0 Comments