ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ಇಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸದ್ಯ ವಿಜಯ್ ಅವರು ತಮ್ಮ ಸಂಪುಟದಲ್ಲಿ 9 ಮಂದಿ ಶಾಸಕರಿಗೆ ಮಂತ್ರಿಗಿರಿ ನೀಡಿದ್ದಾರೆ. ಟಿವಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದರಿಂದ ಈ ಪಕ್ಷಗಳ ಶಾಸಕರು ಸಂಪುಟ ಸೇರುತ್ತಿಲ್ಲ. ಸರ್ಕಾರ ರಚನೆಯ ಬೆನ್ನಲ್ಲೇ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಮೇ 13ರವರೆಗೆ ಗಡುವು ನೀಡಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ವಿಜಯ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.
ಇದು ನನ್ನ ಸರ್ಕಾರವಲ್ಲ, ಇದು ನಿಮ್ಮ ಸರ್ಕಾರ
ರಾಜ್ಯದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡಲು ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಘೋಷಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತಮ್ಮ ಮೊದಲ ಭಾಷಣದಲ್ಲಿ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಇಂದು ಸುಮಾರು 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲದ ಹೊರೆಯೊಂದಿಗೆ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಸಾರ್ವಜನಿಕರಿಗೆ ರಾಜ್ಯದ ನೈಜ ಸ್ಥಿತಿಯನ್ನು ತಿಳಿಸುವುದು ನನ್ನ ಕರ್ತವ್ಯ. ಇದಕ್ಕಾಗಿ ನಾವು ಶ್ವೇತಪತ್ರವನ್ನು ಬಿಡುಗಡೆ ಮಾಡುತ್ತೇವೆ. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸಗೊಳಿಸುವ ರಾಜಕಾರಣವನ್ನು ತಾನು ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾನು ಪಾರದರ್ಶಕತೆಯಿಂದ ಸರ್ಕಾರವನ್ನು ನಡೆಸುತ್ತೇನೆ. ಪ್ರತಿಯೊಂದು ನಿರ್ಧಾರವೂ ಸಾರ್ವಜನಿಕರಿಗೆ ತಿಳಿಯುವಂತಿರಬೇಕು. ಇದು ಕೇವಲ ನನ್ನ ಸರ್ಕಾರವಲ್ಲ, ಇದು ನಿಮ್ಮ (ಜನರ) ಸರ್ಕಾರ. ಅಧಿಕಾರ ಎಂಬುದು ಜನಸೇವೆಯ ಜವಾಬ್ದಾರಿ ಎಂದು ಹೇಳಿದರು. ಸರ್ಕಾರದ ವ್ಯವಸ್ಥೆಯನ್ನು ಸರಿದಾರಿಗೆ ತರಲು ಮತ್ತು ಕಾರ್ಯನಿರ್ವಹಿಸಲು ನನಗೆ ಸ್ವಲ್ಪ ಸಮಯ ನೀಡಬೇಕು ಎಂದು ಕೇಳಿಕೊಂಡ ವಿಜಯ್ ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ಸಂಪೂರ್ಣವಾಗಿ ಕೊನೆಗೊಳಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಭರವಸೆ ನೀಡಿದರು.

0 Comments