ಪೈವಳಿಕೆ: ಇಲ್ಲಿನ ಪಂಚಾಯತಿನ 3ನೇ ವಾರ್ಡ್ ವ್ಯಾಪ್ತಿಯ ಸಣ್ಣಾಡ ಎಂಬಲ್ಲಿ ಸುಮಾರು 40 ವರ್ಷ ಹಳೆಯ ಮನೆಯೊಂದು ಗಾಳಿ ಮಳೆಗೆ ಕುಸಿದು ಬಿದ್ದಿದ್ದು ಮನೆಯೊಳಗೆ ಕುಳಿತುಕೊಳ್ಳಲಾಗದೆ ಬಡ ದಂಪತಿಗಳು ಊರು ಬಿಟ್ಟು ಬಾಡಿಗೆ ಕೊಠಡಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾರಾಯಣ ಪೂಜಾರಿ ಎಂಬ ದಂಪತಿಗಳಿಗಾಗಿದೆ ಈ ದುಸ್ಥಿತಿ ಬಂದೊದಗಿರುವುದು. ಇವರ ಮನೆ ನಿರ್ಮಿಸಿ ಸುಮಾರು 37 ವರ್ಷ ಕಳೆದಿದ್ದು ಮಣ್ಣಿನ ಗೋಡೆ, ಹೆಂಚಿನ ಮಾಡಿನ ಮನೆ ಶಿಥಿಲಾವಸ್ಥೆಗೆ ತಲುಪಿದ್ದು ಹೊಸ ಮನೆಗಾಗಿ ಇವರು ಕಳೆದ ಹತ್ತು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ಮನೆ ಲಭಿಸಿಲ್ಲ.
ಮನೆ ಅಲ್ಲಲ್ಲಿ ಸೋರುತ್ತಿರುವ ಕಾರಣ ಟರ್ಪಾಲು ಹಾಸಿ ಇದರಲ್ಲಿಯೇ ವಾಸವಾಗಿದ್ದರು. ಇದೀಗ ಈ ಬಾರಿಯ ತೀವ್ರ ಮಳೆಗೆ ಮನೆ ಕುಸಿದಿದ್ದು ಮನೆಯೊಳಗೆ ನಿಲ್ಲಲು ಆಗದ ಪರಿಸ್ಥಿತಿಯಲ್ಲಿ ನಾರಾಯಣ ಪೂಜಾರಿಯವರು ಪತ್ನಿ ಸುಜಾತರ ಜತೆ ಬಾಡಿಗೆ ಕೊಠಡಿಯನ್ನಶ್ರಯಿಸಿದ್ದಾರೆ. ನಾಡಿನ ಮೂಲೆ ಮೂಲೆಗು ಅಭಿವೃದ್ಧಿ ಪಸರಿಸಿದೆ ಎನ್ನುವ ರಾಜಕೀಯ ಪಕ್ಷಗಳು,ಆಡಳಿತಾರೂಢ ಸರಕಾರಗಳು ಈ ಬಡವರ ವಸತಿಯ ಕನಸಿನ ಬಗ್ಗೆ ಒಮ್ಮೆ ಕಣ್ಣು ತೆರೆಯಬೇಕಾಗಿದೆ. ಒಂದೆಡೆ ಬಡತನ ಇನ್ನೊಂದೆಡೆ ಮಕ್ಕಳಿಲ್ಲದ ಕೊರಗು ಈ ಬಡ ದಂಪತಿಗಳಿಗೆ ಸ್ಥೈರ್ಯ ತುಂಬುವ ಅಥವ ಕುಳಿತುಕೊಳ್ಳಲು ಚಿಕ್ಕದಾದರೂ ಒಂದು ಮನೆ ನಿರ್ಮಿಸಿಕೊಡುವಲ್ಲಿ ಸ್ಥಳೀಯ ಸಾಮಾಜಿಕ ಸಂಘ ಸಂಸ್ಥೆಗಳು ಇವರತ್ತ ಗಮನ ಹರಿಸುವರೇ ಎಂಬುದಾಗಿ ಕಾತರದಿಂದಿದೆ ಈ ಬಡ ಕುಟುಂಬ.


0 Comments