Ticker

6/recent/ticker-posts

Ad Code

ಮಂಗಳೂರು ಸಹಾಯಕ ಕಾರ್ಮಿಕ ಇಲಾಖೆಯ ಮುಂಭಾಗ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆ

ಮಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೀಡಿ ಕಾರ್ಮಿಕರು ಮಂಗಳೂರು ಸಹಾಯಕ ಕಾರ್ಮಿಕ ಇಲಾಖೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡುತ್ತಾ '2024ರಿಂದ ಸರಕಾರ ನಿಗದಿ ಪಡಿಸಿ ಆದೇಶ ಮಾಡಿದ ಕನಿಷ್ಠ ಕೂಲಿಯನ್ನು ಕೂಡಾ ಬೀಡಿ ಮಾಲಕರು ನೀಡದೆ ವಂಚಿಸುತ್ತಿರುವುದು ಖಂಡನೀಯ' ಎಂದರು. ಕಾರ್ಮಿಕರಿಗೆ ಈಗ ಇದ್ದ ವೇತನವನ್ನು ಹಿಮ್ಮುಖಗೊಳಿಸಿ, ಸರಕಾರ ಮಾಲಕರ ಪರವಾಗಿ ಆದೇಶ ಮಾಡಿದ್ದರೂ ಬೀಡಿ ಮಾಲಕರು ಆ ಕೂಲಿಯನ್ನೂ ಕೂಡಾ ಜಾರಿ ಮಾಡದೆ ನಿರಂತರ ಬೀಡಿ ಕಾರ್ಮಿಕರನ್ನು ವಂಚಿಸುತ್ತಾ ಬರುತ್ತಿದ್ದಾರೆ ಎಂದರು. ಇದನ್ನು ಸಿಐಟಿಯು ಎಂದೂ ಸಹಿಸಲು ಸಾಧ್ಯವಿಲ್ಲ ಎಂದರು.

ಬಳಿಕ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್ ಅವರು ಸರಕಾರ ನಿಗದಿಗೊಳಿಸಿದ ಕಾನೂನು ಬದ್ಧ ವೇತನ, ತುಟ್ಟಿಭತ್ಯೆ, ಎಲ್ಲವನ್ನೂ ವಂಚಿಸುತ್ತಾ, ದೇಶದ ಕಾನೂನಿಗೆ ಗೌರವವನ್ನೇ ನೀಡದ ಬೀಡಿ ಮಾಲಕರು, ಬೀಡಿ ಕಟ್ಟಿಸಿ ಬಡ ಮಹಿಳೆಯರನ್ನು ವಂಚಿಸುವುದರ ವಿರುದ್ಧ ಕ್ರಮ ಕೈಗೊಳ್ಳಲಾಗದ ರಾಜಕೀಯದಡಿ ನಾವಿರುವಂತಾಗಿರುವುದು ನಮ್ಮ ದುರಂತ ಎಂದರು. ನಮ್ಮ ಬದುಕಿಗೆ ಆಸರೆ ಆಗಿ ಎಂದು ಮತ ನೀಡಿ ಗೆಲ್ಲಿಸಿದ ನಮ್ಮ ಶಾಸಕ ಸಂಸದರು ನಾವು ದುಡಿದಿದ್ದಕ್ಕೆ ವೇತನ ನೀಡದೆ ವಂಚಿಸುವ ಬೀಡಿ ಮಾಲಕರ ರಕ್ಷಣೆಗೆ ನಿಂತಿದ್ದಾರೆ ಎಂದರೆ ಇಂತಹ ರಾಜಕೀಯವನ್ನು ಸೋಲಿಸುವುದು ನಮ್ಮೆಲ್ಲರ ಪ್ರಥಮ ಗುರಿಯಾಗಬೇಕು ಮತ್ತು ಆ ಮೂಲಕ ನಾವು ನಮ್ಮ ಬಾಕಿ ವೇತನವನ್ನು ಪಡೆಯಲು ಸಿದ್ದರಾಗಬೇಕು ಎಂದವರು ಕಾರ್ಮಿಕರಿಗೆ ಕರೆ ನೀಡಿದರು. ಇನ್ನು ಒಂದು ವಾರದ ಒಳಗೆ ಪ್ರತಿ 1000 ಬೀಡಿಗೆ ತಲಾ ರೂ 40 ರಂತೆ ಬಾಕಿ ಇರುವ ವೇತನವನ್ನು ಪಾವತಿಸದಿದ್ದರೆ ಡಿ.8 ರಂದು ಜಿಲ್ಲಾ ಕೇಂದ್ರದಲ್ಲಿ ಬೀಡಿ ಕಾರ್ಮಿಕರನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು  ಎಚ್ಚರಿಕೆ ನೀಡಿದರು.

ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಸುಕುಮಾ‌ರ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಐಟಿಯು ಮುಖಂಡರುಗಳಾದ ವಸಂತ ಆಚಾರಿ, ಜಯಂತಿ ಬಿ ಶೆಟ್ಟಿ, ಈಶ್ವರಿ ಪದ್ಮುಂಜ ಮೊದಲಾದವರು ಮಾತನಾಡಿದರು. ಪದ್ಮಾವತಿ ಶೆಟ್ಟಿ, ವಸಂತಿ ಕುಪ್ಪೆಪದವು, ಜಯಂತ್ ನಾಯ್ಕ, ಲೋಲಾಕ್ಷಿ, ಭಾರತಿ ಬೋಳಾರ, ಜಯಶ್ರೀ ಬೆಳ್ತಂಗಡಿ, ಗಿರಿಜ ಮೂಡಬಿದ್ರೆ, ಲಕ್ಷ್ಮಿ, ಜಯಲಕ್ಷ್ಮಿ, ದ.ಕ. ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ನೋಣಯ ಗೌಡ, ಹೊನ್ನಯ ಅಮೀನ್, ಭವಾನಿ, ಉದಯ ಕುಮಾರ್, ಚಂದ್ರ ಪೂಜಾರಿ, ಉಡುಪಿ ಜಿಲ್ಲೆಯ ಮುಖಂಡರುಗಳಾದ ಕವಿರಾಜ್, ಸುನೀತ, ಉಮೇಶ್ ಕುಂದರ್, ಬಲ್ಕಿಸ್, ಕೆ. ಯಾಧವ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಪ್ರಮೋದಿನಿ, ಹಾಗೂ ಸಮಾನ ಮನಸ್ಕ ಸಂಘಟನೆಗಳ ಮುಖಂಡರೇ  ಮೊದಲಾದವರು ಪ್ರತಿಭಟನೆಗೆ ನೇತೃತ್ವವಹಿಸಿದರು.

Post a Comment

0 Comments