ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವು ಕೇವಲ ಘಟನೆಗಳ ಸಂಕಲನವಲ್ಲ, ಅದು ಅಸಂಖ್ಯಾತ ವೀರರ ತ್ಯಾಗ ಬಲಿದಾನಗಳ ಕಥೆ. ಈ ಕಥೆಯ ಮುಂಚೂಣಿ ನಾಯಕರಲ್ಲಿ ಒಬ್ಬರು ಲಾಲಾ ಲಜಪತ್ ರಾಯ್. ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಸಿದ್ಧರಾದ 'ಲಾಲ್-ಬಾಲ್-ಪಾಲ್' ಎಂಬ ತ್ರಿಮೂರ್ತಿಗಳಲ್ಲಿ ಲಾಲಾ ಲಜಪತ್ ರಾಯ್ ಅವರು ಒಬ್ಬರಾಗಿದ್ದು, ಭಾರತೀಯ ಕ್ರಾಂತಿಕಾರಿ ಹೋರಾಟಕ್ಕೆ ಹೊಸ ಚೈತನ್ಯ ನೀಡಿದವರು. ಇವರ ಧೈರ್ಯ ಮತ್ತು ಸಾಹಸಕ್ಕಾಗಿ ಇವರನ್ನು 'ಪಂಜಾಬ್ ಕೇಸರಿ' ಅಥವಾ 'ಲಯನ್ ಆಫ್ ಪಂಜಾಬ್' ಎಂದು ಗೌರವದಿಂದ ಕರೆಯಲಾಗುತ್ತದೆ. ಬ್ರಿಟಿಷರ ದಬ್ಬಾಳಿಕೆಯನ್ನು ಎದೆಯೊಡ್ಡಿ ಎದುರಿಸಿದ ಅವರು, ದೇಶಭಕ್ತಿಯ ಕಿಚ್ಚನ್ನು ಜನಸಾಮಾನ್ಯರಲ್ಲಿ ಹಬ್ಬಿಸಿದವರು. ಇಂದು ಅವರ 161ನೇ ಜನ್ಮದಿನ. ಈ ಸಂದರ್ಭದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಪಾಯವನ್ನೇ ನಡುಗಿಸಿದ ಆ 'ಸಿಂಹ'ದ ಸ್ಮರಣೆ ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯಕ.
ಲಾಲಾ ಲಜಪತ್ ರಾಯ್ ಅವರು ಜನವರಿ 28, 1865 ರಂದು ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಧುಡಿಕೆ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮುನ್ಷಿ ರಾಧಾ ಕಿಶನ್ ಗುಲಾಟಿ ಒಬ್ಬ ಶಿಕ್ಷಕರಾಗಿದ್ದರು. ಲಜಪತ್ ರಾಯ್ ಅವರು ಕಾನೂನು ಅಭ್ಯಾಸ ಮಾಡಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರೂ, ದೇಶಭಕ್ತಿಯ ಸೆಳೆತದಿಂದಾಗಿ ತಮ್ಮ ಬದುಕನ್ನು ದೇಶದ ಸೇವೆಗೆ ಮೀಸಲಿಟ್ಟರು.
19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆರಂಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ 'ಮೃದು ಧೋರಣೆ'ಗಿಂತ 'ತೀವ್ರಗಾಮಿ' ಆಲೋಚನೆಗಳು ಮುಖ್ಯವೆಂದು ಸಾರಿದವರು ಲಾಲಾ ಲಜಪತ್ ರಾಯ್. ಬಾಲ ಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ಅವರೊಂದಿಗೆ ಸೇರಿ 'ತೀವ್ರಗಾಮಿ' ಪಂಥವನ್ನು ಮುನ್ನಡೆಸಿದರು. ಬ್ರಿಟಿಷರ ಮುಂದೆ ಬೇಡುವುದಕ್ಕಿಂತ, ನಮ್ಮ ಹಕ್ಕನ್ನು ಹೋರಾಟದ ಮೂಲಕ ಪಡೆಯಬೇಕು ಎಂದು ಪ್ರತಿಪಾದಿಸಿದವರು ಇವರು. ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸಿ ಭಾರತೀಯ ವಸ್ತುಗಳನ್ನು ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಇದರಿಂದಾಗಿ ದೇಶಾದ್ಯಂತ ಸ್ವದೇಶಿ ಚಳುವಳಿ ಕಿಚ್ಚಿನಂತೆ ಹಬ್ಬಿತು. ಸ್ವಾತಂತ್ರ್ಯದ ಹಂಬಲ ಕೇವಲ ವಿದ್ಯಾವಂತರಿಗೆ ಸೀಮಿತವಾಗದೆ, ಕಾರ್ಮಿಕರು ಮತ್ತು ರೈತರವರೆಗೂ ತಲುಪುವಂತೆ ಮಾಡಿದರು. ಲಜಪತ್ ರಾಯ್ ಕೇವಲ ರಾಜಕೀಯಕ್ಕೆ ಸೀಮಿತರಾಗಲಿಲ್ಲ. ಭಾರತ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲವಾಗಬೇಕು ಎಂಬುದು ಅವರ ಗುರಿಯಾಗಿತ್ತು. ಉತ್ತಮ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದರು. ಆರ್ಯ ಸಮಾಜದ ಪ್ರಭಾವಕ್ಕೆ ಒಳಗಾಗಿದ್ದ ಅವರು, ಅದರ ಸಕ್ರಿಯ ಸದಸ್ಯರಾಗಿದ್ದರಲ್ಲದೆ ಅಸ್ಪೃಶ್ಯತೆ ನಿವಾರಣೆ ಮತ್ತು ಶಿಕ್ಷಣ ಪ್ರಸಾರಕ್ಕಾಗಿ ಶ್ರಮಿಸಿದರು. ಅಮೇರಿಕಾದಲ್ಲಿದ್ದಾಗ ಅಲ್ಲಿನ ಭಾರತೀಯರನ್ನು ಸಂಘಟಿಸಿ 'ಇಂಡಿಯನ್ ಹೋಮ್ ರೂಲ್ ಲೀಗ್' ಸ್ಥಾಪಿಸಿದರು. ಭಾರತೀಯರ ಹಣ ಭಾರತದ ಅಭಿವೃದ್ಧಿಗೇ ಬಳಕೆಯಾಗಬೇಕೆಂದು 1894 ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನ್ನು ಸ್ಥಾಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದರು.
1928ರಲ್ಲಿ ಭಾರತೀಯರ ಅಭಿಪ್ರಾಯ ಕೇಳದೆ ನೇಮಕವಾದ 'ಸೈಮನ್ ಕಮಿಷನ್' ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು.'ಸೈಮನ್ ಕಮಿಷನ್' ಭಾರತಕ್ಕೆ ಬಂದಾಗ, "ಸೈಮನ್ ಗೋ ಬ್ಯಾಕ್" (ಸೈಮನ್ ಹಿಂದಕ್ಕೆ ಹೋಗು) ಎಂಬ ಘೋಷಣೆಯೊಂದಿಗೆ ಲಾಹೋರ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಮುನ್ನಡೆಸಿದರು. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಲಜಪತ್ ರಾಯ್ ಅವರ ಮೇಲೆ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ಆದೇಶದಂತೆ ಪೊಲೀಸರು ಅಮಾನುಷವಾಗಿ ಲಾಠಿ ಪ್ರಹಾರ ಮಾಡಿದರು. ತೀವ್ರವಾಗಿ ಗಾಯಗೊಂಡಿದ್ದರೂ ಅವರು ಕುಗ್ಗಲಿಲ್ಲ. "ನನ್ನ ಮೇಲೆ ಬಿದ್ದ ಪ್ರತಿಯೊಂದು ಲಾಠಿ ಪೆಟ್ಟು ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಲಿದೆ" ಎಂದು ಗರ್ಜಿಸಿದರು. ಈ ಘಟನೆಯ ಕೆಲವು ದಿನಗಳ ನಂತರ ಅಂದರೆ ನವೆಂಬರ್ 17, 1928 ರಂದು ಅವರು ವೀರಮರಣವನ್ನಪ್ಪಿದರು. ಲಾಲಾ ಲಜಪತ್ ರಾಯ್ ಅವರ ಬಲಿದಾನವು ವ್ಯರ್ಥವಾಗಲಿಲ್ಲ. ಈ ಬಲಿದಾನವು ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜಗುರು ಅಂತಹ ಯುವ ಕ್ರಾಂತಿಕಾರಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿತು. ಮುಂದೆ ಅವರು ಸ್ಯಾಂಡರ್ಸ್‌ನನ್ನು ಹತ್ಯೆ ಮಾಡುವ ಮೂಲಕ ಲಜಪತ್ ರಾಯ್ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಂಡರು.
ಲಾಲಾ ಲಜಪತ್ ರಾಯ್ ಅವರ ಜೀವನವು ಇಂದಿನ ಯುವಶಕ್ತಿಗೆ ಸ್ಫೂರ್ತಿಯ ಚಿಲುಮೆ. ಅವರು ಹಾಕಿಕೊಟ್ಟ ರಾಷ್ಟ್ರೀಯತೆಯ ಭದ್ರ ಬುನಾದಿಯ ಮೇಲೆ ಭಾರತವು ಇಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಎದ್ದು ನಿಂತಿದೆ. ಅವರ ಧೈರ್ಯ, ದೇಶಪ್ರೇಮ ಮತ್ತು ತ್ಯಾಗದ ಫಲವಾಗಿ ನಾವಿಂದು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ಅವರ ಈ ಮಹಾನ್ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಅವರ ಜನ್ಮದಿನದ ಈ ಸಂದರ್ಭದಲ್ಲಿ, ಅವರ ಆದರ್ಶಗಳನ್ನು ನೆನಪಿಸಿಕೊಳ್ಳುವುದು ಮತ್ತು ದೇಶಕ್ಕಾಗಿ ಅವರು ನೀಡಿದ ತ್ಯಾಗವನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ. ಅವರ ಜನ್ಮದಿನವು ಕೇವಲ ಒಂದು ಆಚರಣೆಯಾಗದೆ ದೇಶದ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಮೌಲ್ಯಗಳನ್ನು ಮರುಸ್ಥಾಪಿಸುವ ದಿನವಾಗಬೇಕು. ಅವರು ಅಂದು ಕಂಡ 'ಸಬಲ ಭಾರತ'ದ ಕನಸನ್ನು ನನಸು ಮಾಡುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.
ವನಜಾಕ್ಷಿ ಪಿ. ಚೆಂಬ್ರಕಾನ,

0 Comments