ಗ್ರಾಮೀಣ ಜನರ ಮುಖ್ಯ ಬೇಡಿಕೆಗೆ ದಿವ್ಯ ನಿರ್ಲಕ್ಷ....
ಕಾಸರಗೋಡು : ಯಾವುದೇ ಪ್ರದೇಶದ ಅಭಿವೃದ್ಧಿ ಎಂಬುದಕ್ಕೆ ಮೂಲ ಕಾರಣೀಭೂತರು ಅಲ್ಲಿನ ಜನಪ್ರತಿನಿಧಿ,ಶಾಸಕರು ಆಗಿರುತ್ತಾರೆ. ಆದರೆ ಇಲ್ಲೊಂದು ಕಡೆ ಕಳೆದ 5 ದಶಕಗಳಿಂದ ಇದ್ದ ಬಹು ಬೇಡಿಕೆಯಾದ ಸೇತುವೆಯೊಂದರ ನಿರ್ಮಾಣಕ್ಕೆ ಸಂಬಂಧಪಟ್ಟವರು ಮೀನಮೇಷ ಎಣಿಸುತ್ತಿದ್ದಾರೆಂದರೆ ಇದು
ಗ್ರಾಮೀಣ ಪ್ರದೇಶದ ಜನ ಜೀವನದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿಕೊಂಡಿದ್ದಾರೆ ಎಂಬುದೇ ಅರ್ಥ ಅಲ್ಲವೇ...!
ಕಾಸರಗೋಡು ವಿಧಾನಸಭಾ ಕ್ಷೇತ್ರದ ನೇರಪಾಡಿ-ಅಜ್ಜಿಮೂಲ ಓಡಂಗಲ್ಲು-ವಿದ್ಯಾಗಿರಿ ರಸ್ತೆಯಲ್ಲಿ ಓಡಂಗಲ್ಲು ಹೊಳೆಗೆ ಸೇತುವೆ ನಿರ್ಮಿಸಲು ಸುಮಾರು 50 ವರ್ಷಗಳಿಂದ ಮನವಿ ಇರಿಸಲಾಗಿತ್ತು. ಈ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಬದಿಯಡ್ಕ-ಕಾಸರಗೋಡು, ಪುತ್ತೂರು-ಮಂಗಳೂರು ಮೊದಲಾದೆಡೆಗೆ ತೆರಳುವ ವಿದ್ಯಾರ್ಥಿಗಳು, ಕಾರ್ಮಿಕರು, ರೋಗಿಗಳು ಈ ರಸ್ತೆಯನ್ನು ಬಳಸುತ್ತಿದ್ದು, ಕುಂಬ್ಡಾಜೆ-ಬದಿಯಡ್ಕ ಪಂಚಾಯಿತುಗಳಿಗೆ ಸಂಪರ್ಕ ಕಲ್ಪಿಸುವ ಹೊಳೆ ಇದಾಗಿದೆ. ಕೀರಿಕ್ಕಾಡು ಪರಿಶಿಷ್ಟ ಜಾತಿ ಉನ್ನತಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ.1973ರಲ್ಲಿ ನೇರಪ್ಪಾಡಿ- ಅಜ್ಜಿಮೂಲೆ ರಸ್ತೆ ನಿರ್ಮಾಣಗೊಂಡಿತ್ತು.ಬಳಿಕ 1987ರಲ್ಲಿ ಅಜ್ಜಿಮೂಲೆ-ವಿದ್ಯಾಗಿರಿ ರಸ್ತೆ ನಿರ್ಮಾಣಗೊಂಡಿದ್ದು, ಇಲ್ಲಿಯವರೆಗೂ ಓಡಂಗಲ್ಲು ನದಿಗೆ ಸೇತುವೆ ನಿರ್ಮಿಸದಿರುವುದು ಬೇಸರದ ಸಂಗತಿ. ಈ ಸೇತುವೆ ಇಲ್ಲದ ಕಾರಣ ಸುಮಾರು ಮೂವತ್ತು ಕುಟುಂಬಗಳು ಈಗಾಗಲೇ ತಮ್ಮ ಮನೆ, ಜಮೀನುಗಳನ್ನು ತೊರೆದಿವೆ. ಸೇತುವೆಯ ಕನಸು ಕಂಡು ಅನೇಕರು ಇಹಲೋಕ ತ್ಯಜಿಸಿದ್ದಾರೆ. ಸೇತುವೆ ನಿರ್ಮಾಣವಾದರೆ ಕುಂಬ್ಡಾಜೆ ಪಂಚಾಯತಿನ ಕೀರಿಕ್ಕಾಡು,ವೊರುಂಬೋಡಿ, ಅಜ್ಜಿಮೂಲೆ, ನೇರಪ್ಪಾಡಿ, ಬದಿಯಡ್ಕ ಪಂಚಾಯತಿನ ವಳಕುಂಜ, ವಿದ್ಯಾಗಿರಿ, ಓಡಂಗಲ್ಲು, ಮುನಿಯೂರು, ನಿವಾಸಿಗಳು ಇದರ ಫಲಾನುಭವಿಗಳಾಗಲಿದ್ದಾರೆ. ಈ ಸೇತುವೆಯ ಉದ್ದೇಶಕ್ಕಾಗಿ ಕುಂಬ್ಡಾಜೆ ಗ್ರಾಮ ಪಂಚಾಯತ್ - ಬದಿಯಡ್ಕ ಗ್ರಾಮ ಪಂಚಾಯತ್ - ಎಣ್ಮಕಜೆ ಗ್ರಾಮ ಪಂಚಾಯತ್ - ಕಾರಡ್ಕ ಬ್ಲಾಕ್ ಪಂಚಾಯತ್ ಮತ್ತು ಕಾಸರಗೋಡು ಬ್ಲಾಕ್ ಪಂಚಾಯತ್ 2019 ರಲ್ಲಿ ನಿರ್ಣಯವನ್ನು ಅಂಗೀಕರಿಸಿದೆ.ಆದರೆ ಯಾವುದೇ ಪ್ರಯೋಜನ ಲಭಿಸಿಲ್ಲ.
ಓಡಂಗಲ್ಲು ಹೊಳೆ ದಾಟಿದರೆ ನಾರಂಪಾಡಿ, ಜಯನಗರ, ಏತಡ್ಕ, ಒಂರ್ಬೋಡಿ, ಕಿನ್ನಿಂಗಾರು, ವಾಣಿನಗರ, ಪೆರ್ಲ ಮೊದಲಾದೆಡೆಗೆ ಹತ್ತಿರ ದಾರಿಯಾಗುತ್ತದೆ. ಇದೀಗ ಏತಡ್ಡ ಭಾಗದ ಜನತೆ ಸುಮಾರು 15 ಕಿ.ಮೀ. ಸುತ್ತಿ ಬಳಸಿ ತೆರಳ ಬೇಕಾಗಿದ್ದು, ಓಡಂಗಲ್ಲು ಹೊಳೆಗೆ ಸೇತುವೆ ನಿರ್ಮಿಸಿದರೆ ಸುಮಾರು 5 ಕಿ.ಮೀ. ನ ಒಳಗೆ ಬದಿಯಡ್ಕಕ್ಕೆ ತಲುಪಬಹುದಾಗಿದೆ.
ಓಡಂಗಲ್ಲು ಹೊಳೆಗೆ ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ನಿರಂತರ ಹೋರಾಟ ನಡೆದಿದೆ. ಈ ಸಮಸ್ಯೆಯನ್ನು ರಾಜ್ಯದ ಮುಖ್ಯಮಂತ್ರಿ, ಲೋಕೋ ಪಯೋಗಿ ಸಚಿವರು ಸಹಿತ ಸ್ಥಳೀಯ ಶಾಸಕರ ಗಮನಕ್ಕೆ ಕ್ರಿಯಾ ಸಮಿತಿಯು ನಿರಂತರವಾಗಿ ತಂದಿದೆ. ಮಾತ್ರವಲ್ಲದೆ ಜಿಲ್ಲೆಯ ಸಮಸ್ಯೆಗಳನ್ನು ಅವಲೋಕಿಸಲು ಭೇಟಿ ನೀಡಿದ ಪ್ರಭಾಕರನ್ ಆಯೋಗದ ಮುಂದೆಯೂ ಈ ವಿಷಯವನ್ನು ತಿಳಿಸಲಾಗಿದೆ. ಆದರೆ ಪರಿಹಾರ ಮಾತ್ರ ಶೂನ್ಯವಾಗಿದೆ. ಕಳೆದ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾದ ಎನ್.ಎ.ನೆಲ್ಲಿಕುನ್ನುವಿಗೆ ಇಲ್ಲಿನ ಜನತೆ ನಿರಂತರ ಮನವಿ ಸಲ್ಲಿಸಿದ್ದರೂ ಸ್ಪಂದಿಸದೆ ನಿರ್ಲಜ್ಷ್ಯ ತೋರ್ಪಡಿಸಿರುವುದು ದೌರ್ಭಾಗ್ಯಕರ. ಇದೀಗ ಮತ್ತೊಂದು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಊರಿನ ಮುಖ್ಯ ಬೇಡಿಕೆಯನ್ನು ಮುಂದಿಟ್ಡುಕೊಙಡು ಜನತೆ ಹೋರಾಟಕ್ಕೆ ಸಜ್ಜಾಗಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು,ರಾಜಕೀಯ ಪಕ್ಷಗಳು ಈ ಬಗ್ಗೆ ಇನ್ನೂ ನಿರ್ಲಕ್ಷ್ಯವಹಿಸಿದರೆ ಈ ಬಾರಿಯ ಚುನಾವಣೆಯನ್ನೆ ಬಹಿ಼ಷ್ಕರಿಸಲು ನಾಡಿನ ಜನತೆ ಮನ ಮಾಡಲಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ ಒಗ್ಗಟ್ಟಿನಿಂದ ಬಹಿರಂಗ ಹೋರಾಟಕ್ಕೆ ಮುಂದಾಗುತ್ತಿದ್ದಾರೆ.

0 Comments