Ticker

6/recent/ticker-posts

Ad Code

ಮಗಳ‌ ಮರಣಾನಂತರ ಅಂಗಾಂಗ ದಾನ‌ಗೈದ ಅಲಿನ್ ಪೋಷಕರನ್ನು "ಮನ್ ಕಿ ಬಾತ್" ನಲ್ಲಿ ಅಭಿನಂದಿಸಿದ ಪ್ರಧಾನಿ ಮೋದಿ

ನಾಲ್ಕು ಮಕ್ಕಳಿಗೆ ಅಂಗಾಂಗಗಳನ್ನು ದಾನ ಮಾಡಿದ ಹತ್ತು ತಿಂಗಳ ಮಗು ಅಲಿನ್ ಶೆರಿನ್ ಅಬ್ರಹಾಂ ಅವರ ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಅವರ ನಿರ್ಧಾರ ಪ್ರತಿಯೊಬ್ಬ ಭಾರತೀಯ ನಾಗರಿಕನ ಹೃದಯವನ್ನು ತಟ್ಟಿದೆ ಎಂದು ಮೋದಿ ತಮ್ಮ "ಮನ್ ಕಿ ಬಾತ್" ರೇಡಿಯೋ ಭಾಷಣದಲ್ಲಿ ಹೇಳಿದ್ದಾರೆ.

ಅಲಿನ್ ಪೋಷಕರ ಈ ನಿರ್ಧಾರವು ಅವರ ಚಿಂತನೆಯ ಉನ್ನತಿ ಮತ್ತು ಮನಸ್ಸಿನ ವಿಶಾಲತೆಯನ್ನು ಪ್ರತಿಬಿಂಬಿಸುತ್ತದೆ. ಬೇರೆ ಯಾವುದೇ ಕುಟುಂಬಕ್ಕೂ ಈ ಗತಿ ಬರಬಾರದು. ಮಗುವನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುಃಖ ಇನ್ನೊಂದಿಲ್ಲ. ಆ ನೋವಿನ ನಡುವೆ ಅವರು ತಮ್ಮ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಅಲೀನ್ ಈಗ ನಮ್ಮೊಂದಿಗಿಲ್ಲದಿದ್ದರೂ, ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿಗಳ ಪಟ್ಟಿಯಲ್ಲಿ ಆ ಮಗುವಿನ ಹೆಸರು ಶಾಶ್ವತವಾಗಲಿದೆ. ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿಗೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದ ಪ್ರಧಾನಿ, ವಿಭಿನ್ನ ಹಿನ್ನೆಲೆಯ ಅಂಗಾಂಗ ದಾನಿಗಳ ಹೆಸರುಗಳನ್ನು ಉಲ್ಲೇಖಿಸಿದರು.

ಪತ್ತನಂತಿಟ್ಟ ಜಿಲ್ಲೆಯ ಮಲ್ಲಪ್ಪಳ್ಳಿಯ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಅವರ 10 ತಿಂಗಳ ಪುತ್ರಿ ಅಲಿನ್ ಶೆರಿನ್ ಫೆ.5ರಂದು ತಾಯಿ ಮತ್ತು ಅಜ್ಜ ಅಜ್ಜಿಯೊಂದಿಗೆ ಕಾರಿನಲ್ಲಿ ಕೋಟ್ಟಯಂನಿಂದ ತಿರುವಲ್ಲಾ ಪ್ರಯಾಣಿಸುತ್ತಿದ್ದಾಗ ಪಳ್ಳಂ ಬೋರ್ಮಾ ಜಂಕ್ಷನ್ ಬಳಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಳು. ಆಕೆಯನ್ನು ಚಂಗನಾಶ್ಶೇರಿ ಮತ್ತು ತಿರುವಲ್ಲದ ಆಸ್ಪತ್ರೆ ಹಾಗೂ ಬಳಿಕ ಫೆಬ್ರವರಿ 7ರಂದು ಎರ್ನಾಕುಳಂ ಅಮೃತ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ಫೆ.13ರಂದು ಮಗುವಿನ ಮೆದುಳು ನಿಷ್ಕ್ರಿಯಗೊಂಡಿತ್ತು. ಹೆತ್ತವರು ಆಕೆಯ ಅಂಗಾಂಗಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಅಲಿನ್ ಶೆರಿನ್ ಅಬ್ರಹಾಂಳ ಮೂತ್ರಪಿಂಡವನ್ನು ಶ್ರೇಯಾ ಎಂಬ 10 ವರ್ಷದ ಬಾಲಕಿ ಮತ್ತು ಯಕೃತ್ತನ್ನು ದೃಯಾ ಎಂಬ ಆರು ತಿಂಗಳ ಮಗುವಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಆಕೆಯ ಹೃದಯ ಕವಾಟವನ್ನು ತಿರುವನಂತಪುರದ ಶ್ರೀ ಚಿತ್ರ ಸಂಸ್ಥೆ ಹಾಗೂ ಕಣ್ಣುಗುಡ್ಡೆಗಳನ್ನು ಅಮೃತ ಆಸ್ಪತ್ರೆಯ ಕಣ್ಣಿನ ಬ್ಯಾಂಕ್‌ಗೆ ದಾನ ಮಾಡಲಾಗಿದೆ.

Post a Comment

0 Comments