Ticker

6/recent/ticker-posts

Ad Code

ಬೆಳ್ಳೂರು ಗ್ರಾ.ಪಂನ ಅರ್ತಿಕುಡ್ಲು ದೇಶಮೂಲೆವರೆಗಿನ ಸೌರ ಬೇಲಿ ವ್ಯವಸ್ಥೆ ಉದ್ಘಾಟನೆ

ಬೆಳ್ಳೂರು: ರಾಜ್ಯದ ಅರಣ್ಯ ಗಡಿಯಲ್ಲಿ ಕಾಡುಪ್ರಾಣಿಗಳ ದಾಳಿಯಿಂದ ಸಂಭವಿಸುವ ಬೆಳೆ ಹಾನಿಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ವಿಮಾ ಯೋಜನೆಯನ್ನು ಘೋಷಿಸಲಾಗಿದೆ. ಬೆಳೆ ನಾಶಕ್ಕೆ ಲಭಿಸುವ ಪರಿಹಾರ ಮೊತ್ತ ಸೀಮಿತವಾಗಿದ್ದು ವಿಶೇಷ ಯೋಜನೆಯ ಅನುಷ್ಠಾನದಿಂದ ರೈತರಿಗೆ ಹೆಚ್ಚಿನ ಪರಿಹಾರ ಮೊತ್ತ ಲಭಿಸುವುದು ಎಂದು ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ.ಶಶೀಂದ್ರನ್ ಹೇಳಿದರು. ಬೆಳ್ಳೂರು ಗ್ರಾ.ಪಂ ಅರ್ತಿಕುಡ್ಲುವಿನಿಂದ ಎಣ್ಮಕಜೆ ಗ್ರಾಪಂ ಗಡಿ ದೇಶಮೂಲೆವರೆಗಿನ 9ಕಿಮೀ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಸೌರ ಬೇಲಿಯ ವ್ಯವಸ್ಥೆಯನ್ನು ಆನ್‌ಲೈನ್‌ನಲ್ಲಿ ಉದ್ಘಾಟಿಸಿ ಸಚಿವರು ಈ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ.)ಯ  37 ಲಕ್ಷ ರೂ.ಮತ್ತು ಬೆಳ್ಳೂರು ಗ್ರಾಪಂ 1.88 ಲಕ್ಷ ರೂ.ಗಳ ಆರ್ಥಿಕ ನೆರವಿನಿಂದ ಸೌರ ಬೇಲಿಯ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಕಾಡುಕೋಣ ಮತ್ತಿತರ ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಕ್ಕೆ  ಬರುವುದನ್ನು ತಡೆಯಲು ಸರಕಾರ ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದರು.

ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ಬಾಂಧವ್ಯವನ್ನು ಬಲಪಡಿಸಲು ನಾನಾ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಅರಣ್ಯ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ 241 ಪಂಚಾಯತಿಗಳಲ್ಲಿ ತೀವ್ರ ಯಜ್ಞ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಯೋಜನೆಯ ಎರಡು ಹಂತ ಪೂರ್ಣಗೊಂಡಿದ್ದು, ಮೂರನೇ ಹಂತದಲ್ಲಿ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕಾಡು ಪ್ರಾಣಿಗಳಿಂದ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟುವ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ರೈತರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಶ್ರಮಿಸುತ್ತಿದೆ ಎಂದು ಸಚಿವರು ಹೇಳಿದರು.

ಬೆಳ್ಳೂರು ಗ್ರಾಪಂ ಅಧ್ಯಕ್ಷೆ ಮಾಲಿನಿ ಎಂ.ಅಧ್ಯಕ್ಷತೆಯಲ್ಲಿ ಕುಳದಪಾರೆ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರಡ್ಕ ಬ್ಲಾಕ್ ಪಂ. ಉಪಾಧ್ಯಕ್ಷೆ ವಿ.ಉಷಾ, ಸದಸ್ಯ ಜಯಾನಂದ ಕುಳ, ಬೆಳ್ಳೂರು ಗ್ರಾಪಂ ಸದಸ್ಯರಾದ ಶ್ರೀಧರ ಎಂ., ಸತ್ಯವತಿ ರೈ, ಎನ್.ಸುಕುಮಾರ, ಸುಲೈಖಾ, ಎಂ.ಚೈತ್ರ, ಎಂ. ಶ್ರೀಪತಿ, ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಪಿ. ರಾಘವೇಂದ್ರ, ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಬಿ.ಉದಯ ಸೂರ್ಯನ್, ಕಾರಡ್ಕ ಕೃಷಿ ಸಹಾಯಕ ನಿರ್ದೇಶಕ ಬಿ. ಗಿರೀಶ್, ಬೆಳ್ಳೂರು ಕೃಷಿ ಅಧಿಕಾರಿ ಅದ್ವೈತ್ ಎಂ.ವಿ., ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎ.ಕೆ. ಕುಶಲ, ರಾಮಚಂದ್ರ ಎಂ., ಕೆ.ಪಿ.ರವೀಂದ್ರನಾಥ ಶೆಟ್ಟಿ, ಎಂ.ಎಚ್. ​ಮೊಹಮ್ಮದ್ ಹಾಜಿ ಮಾತನಾಡಿದರು. ಐ.ಎಫ್‌.ಎಸ್.ಉತ್ತರ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಅಂಜನ್ ಕುಮಾರ್ ಸ್ವಾಗತಿಸಿದರು. ಕಾಸರಗೋಡು ವಿಭಾಗೀಯ ಅರಣ್ಯ ಅಧಿಕಾರಿ ಜಾಯ್ ಮ್ಯಾಥ್ಯೂ ವಂದಿಸಿದರು.

Post a Comment

0 Comments